ಬೆಂಗಳೂರು(ಆ.31): ತವರಿನ ಅಭಿಮಾನಿಗಳ ಅಭೂತಪೂರ್ವ ಬೆಂಬಲದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡವು  23-32 ಅಂಕಗಳೊಂದಿಗೆ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡದೆದುರು ಶರಣಾಯಿತು. ಬುಲ್ಸ್ ಸ್ಟಾರ್ ರೇಡರ್ ಗಳಾದ ಪವನ್ ಹಾಗೂ ರೋಹಿತ್ ಕೇವಲ ಮೂರು ಅಂಕಗಳಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು.

PKL 2019 ತೆಲುಗು ಟೈಟಾನ್ಸ್ ಗೆ 6ನೇ ಸೋಲು

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್ ತಂಡವು ಸಚಿನ್ ಟ್ಯಾಕಲ್ ಮಾಡುವುದರೊಂದಿಗೆ ಅಂಕಗಳ ಖಾತೆ ತೆರೆಯಿತು. ಇದರ ಬೆನ್ನಲ್ಲೇ ನಾಯಕ ರೋಹಿತ್ ಕುಮಾರ್ ಮೊದಲ ರೈಡ್'ನಲ್ಲೇ ತಂಡಕ್ಕೆ ಅಂಕ ತಂದಿತ್ತರು. ನಂತರ ಗುಜರಾತ್ ನ ರೋಹಿತ್ ಗುಲಿಯಾ ಬುಲ್ಸ್ ಡಿಫೆಂಡರ್ ಮಹೇಂದರ್ ಸಿಂಗ್ ಔಟ್ ಮಾಡುವ ಮೂಲಕ ತಂಡಕ್ಕೆ ಮೊದಲ ಅಂಕ ತಂದಿತ್ತರು. ಆರನೇ ನಿಮಿಷದಲ್ಲಿ ಉಭಯ ತಂಡಗಳು 6-6 ಅಂಕಗಳ ಸಮಬಲ ಸಾಧಿಸಿದವು. ಆ ಬಳಿಕ ಚುರುಕಿನ ಆಟಕ್ಕೆ ಮುಂದಾದ ಗುಜರಾತ್ ನಿರಂತರ ಅಂಕ ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಬುಲ್ಸ್'ನ ಸ್ಟಾರ್ ರೇಡರ್'ಗಳಾದ ರೋಹಿತ್, ಪವನ್ ಅವರನ್ನು ಹೊರಗಿಡುವಲ್ಲಿ ಯಶಸ್ವಿಯಾಯಿತು. ಪರಿಣಾಮ ಪಂದ್ಯದ 14ನೇ ನಿಮಿಷದಲ್ಲಿ ಬುಲ್ಸ್ ಆಲೌಟ್ ಮಾಡಿದ ಗುಜರಾತ್ 14-10 ಮುನ್ನಡೆ ಕಾಯ್ದುಕೊಂಡಿತು. ಇದೇ ಪ್ರದರ್ಶನ ಮುಂದುವರೆಸಿದ ಗುಜರಾತ್ ಮೊದಲಾರ್ಧ ಮುಕ್ತಾಯದ ವೇಳೆಗೆ 18-12 ಅಂಕಗಳ ಮುನ್ನಡೆ ಉಳಿಸಿಕೊಂಡಿತು.

ಇನ್ನು ಮೊದಲಾರ್ಧದ ಹಿನ್ನಡೆಯನ್ನು ಮೆಟ್ಟಿ ನಿಲ್ಲಲು ಬುಲ್ಸ್ ಆಕ್ರಮಣಕಾರಿ ಆಟದ ಮೊರೆ ಹೋಯಿತು. ರೋಹಿತ್ ಗುಲಿಯಾರನ್ನುಸೂಪರ್ ಟ್ಯಾಕಲ್ ಮಾಡಿದ ಮಹೇಂದರ್ ತಂಡಕ್ಕೆ ಎರಡು ಅಂಕ ತಂದಿತ್ತರು. ಇದಾದ ಕೆಲಹೊತ್ತಿನಲ್ಲೇ ಬುಲ್ಸ್ ಡಿಫೆಂಡರ್ ಸೌರಭ್ ನಂದಲ್, ಸಚಿನ್ ಅವರನ್ನು ಸೂಪರ್ ಟ್ಯಾಕಲ್ ಮಾಡಿ ಮತ್ತೆರಡು ಅಂಕಗಳಿಸುವಂತೆ ಮಾಡಿದರು. ಇದರೊಂದಿಂದಿಗೆ ದ್ವಿತಿಯಾರ್ಧದ ಹತ್ತನೇ ನಿಮಿಷದಲ್ಲಿ ಬುಲ್ಸ್ 20-22 ಅಂಕಗಳಿಸುವ ಮೂಲಕ ಕೇವಲ ಎರಡು ಅಂಕಗಳ ಹಿನ್ನಡೆ ಅನುಭವಿಸಿತು. ಆದರೆ ಆ ಬಳಿಕ ಎಚ್ಚೆತ್ತುಕೊಂಡ ಗುಜರಾತ್ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಜತೆಗೆ ಬುಲ್ಸ್'ಗೆ ಅಂಕ ಬಿಟ್ಟುಕೊಡಲಿಲ್ಲ. ಕೊನೆಯ ಮೂರು ನಿಮಿಷಗಳಿದ್ದಾಗ ಆಕ್ರಮಣಕಾರಿ ಆಟಕ್ಕೆ ಮೊರೆಹೋದ ಗುಜರಾತ್ ಕೊನೆಯ ನಿಮಿಷದಲ್ಲಿ ಬೆಂಗಳೂರನ್ನು ಮತ್ತೊಮ್ಮೆ ಆಲೌಟ್ ಮಾಡುವುದರೊಂದಿಗೆ 9 ಅಂಕಗಳ ಅಂತರದ ಭರ್ಜರಿ ಜಯ ದಾಖಲಿಸಿತು.

ಗುಜರಾತ್ ಪರ ಸಚಿನ್ ಹಾಗೂ ಜಿ.ಬಿ ಮೋರೆ ತಲಾ 5 ಅಂಕ ಪಡೆದರೆ, ಪರ್ವೇಶ್ ಹಾಗೂ ರೋಹಿತ್ ಗುಲಿಯಾ ತಲಾ 4 ಅಂಕ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಳೂರು ಬುಲ್ಸ್ ಪರ ಡಿಫೆಂಡಿಂಗ್ ವಿಭಾಗ 13 ಅಂಕ ಗಳಿಸಿತು. ನಂದಲ್ 8, ಮಹೇಂದರ್ 4 ಅಂಕ ಗಳಿಸಿದರು

ರಾಷ್ಟ್ರಗೀತೆ: ಕಳೆದೆರಡು ವರ್ಷಗಳಿಂದ ಕಬಡ್ಡಿ ನೋಡುವ ಅವಕಾಶ ವಂಚಿತರಾಗಿದ್ದ ಬೆಂಗಳೂರಿನ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವಾಗ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.