ಬೆಂಗಳೂರು ಬುಲ್ಸ್ ತಂಡ ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ರೋಚಕವಾಗಿ ಮಣಿಸಿದ ಬುಲ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ಸೆ.07]: ಪ್ರೊ ಕಬಡ್ಡಿಯ ಇಬ್ಬರು ತಾರಾ ರೈಡರ್‌ಗಳಾದ ಪವನ್ ಶೆರಾವತ್ ಹಾಗೂ ಸಿದ್ಧಾರ್ಥ್ ದೇಸಾಯಿ ನಡುವಿನ ಜಿದ್ದಾಜಿದ್ದಿನ ಹೋರಾಟ, ಶುಕ್ರವಾರ ಬೆಂಗಳೂರಿನ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಅಂತಿಮ ಕ್ಷಣದಲ್ಲಿ ಅಂಕ ಗಳಿಸಿ ಪವನ್, ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ 40-39ರ ರೋಚಕ ಗೆಲುವು ತಂದುಕೊಟ್ಟರು.
ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...
ಈ ಜಯದೊಂದಿಗೆ ಬುಲ್ಸ್ ತವರಿನ ಚರಣಕ್ಕೆ ವಿದಾಯ ಹೇಳಿತು. 2 ವರ್ಷಗಳ ಬಳಿಕ ಬೆಂಗಳೂರಲ್ಲಿ ಪಂದ್ಯಗಳನ್ನಾಡಿದ ಬುಲ್ಸ್, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿತು. ಬುಲ್ಸ್‌ಗಿದು ಈ ಆವೃತ್ತಿಯಲ್ಲಿ 9ನೇ ಗೆಲುವಾಗಿದ್ದು, 48 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ. 15 ಪಂದ್ಯಗಳನ್ನು ಆಡಿರುವ ಬುಲ್ಸ್‌ಗೆ ರೌಂಡ್ ರಾಬಿನ್ ಹಂತದಲ್ಲಿ ಇನ್ನು 7 ಪಂದ್ಯ ಬಾಕಿ ಇದ್ದು, ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ.
ಮೊದಲಾರ್ಧದಲ್ಲಿ ಎರಡೂ ತಂಡಗಳು ಹೆಚ್ಚೇನೂ ಅಂಕ ಗಳಿಸಲಿಲ್ಲ. 20 ನಿಮಿಷಗಳ ಮುಕ್ತಾಯಕ್ಕೆ ಬುಲ್ಸ್ 15-12ರ ಮುನ್ನಡೆ ಪಡೆಯಿತು. ದ್ವಿತೀಯಾರ್ಧ ಭಾರೀ ರೋಚಕತೆಯಿಂದ ಕೂಡಿತ್ತು. 22ನೇ ನಿಮಿಷದಲ್ಲಿ ಟೈಟಾನ್ಸ್ ಆಲೌಟ್ ಮಾಡಿದ ಬುಲ್ಸ್ 19-12ರ ಮುನ್ನಡೆ ಪಡೆಯಿತು. 27ನೇ ನಿಮಿಷದಲ್ಲಿ ಸೂಪರ್ ರೈಡ್ ಮಾಡಿದ ಪವನ್ ಅಂತರವನ್ನು 24-18ಕ್ಕೇರಿಸಿದರು. 33ನೇ ನಿಮಿಷದಲ್ಲಿ ಟೈಟಾನ್ಸ್ 2ನೇ ಬಾರಿಗೆ ಆಲೌಟ್ ಆಯಿತು. ಬುಲ್ಸ್ ಮುನ್ನಡೆ 32-23ಕ್ಕೇರಿತು.
ಪ್ರೊ ಕಬಡ್ಡಿಗೆ ಕಂಠೀರವ ಕ್ರೀಡಾಂಗಣ ಸಿಕ್ಕಿದ್ದೇಗೆ?
ಸಿದ್ಧಾರ್ಥ್ 6 ಅಂಕಗಳ ರೈಡ್!
37ನೇ ನಿಮಿಷದಲ್ಲಿ ಸಿದ್ಧಾರ್ಥ್ ಒಂದೇ ರೈಡ್‌ನಲ್ಲಿ ತಂಡಕ್ಕೆ ಬರೋಬ್ಬರಿ 6 ಅಂಕ ತಂದುಕೊಟ್ಟರು. ಸಿದ್ಧಾರ್ಥ್ ನಾಲ್ವರನ್ನು ಔಟ್ ಮಾಡಿದರೆ, ಬುಲ್ಸ್ ಆಲೌಟ್ ಆಗಿದ್ದಕ್ಕೆ ಟೈಟಾನ್ಸ್‌ಗೆ 2 ಅಂಕ ದೊರೆಯಿತು. 39ನೇ ನಿಮಿಷದಲ್ಲಿ ಮತ್ತೊಂದು ಸೂಪರ್ ರೈಡ್ ಮಾಡಿದ ಸಿದ್ಧಾರ್ಥ್, ಟೈಟಾನ್ಸ್ 36-36ರಲ್ಲಿ ಸಮಬಲ ಸಾಧಿಸಲು ಕಾರಣರಾದರು.
ಹೋರಾಟ ಬಿಡದ ಪವನ್
39ನೇ ನಿಮಿಷದಲ್ಲಿ ನಡೆಸಿದ ರೈಡ್‌ನಲ್ಲಿ 2 ಅಂಕ ಗಳಿಸಿದ ಪವನ್, 40ನೇ ನಿಮಿಷದಲ್ಲಿ ನಡೆಸಿದ ರೈಡ್‌ನಲ್ಲೂ 2 ಅಂಕ ಹೆಕ್ಕಿದರು. ಹೀಗಾಗಿ ಗೆಲುವು ಬುಲ್ಸ್ ಕೈತಪ್ಪಲಿಲ್ಲ. ಪವನ್ 23 ರೈಡ್‌ಗಳಿಂದ 22 ಅಂಕ ಗಳಿಸಿದರೆ, ಸಿದ್ಧಾರ್ಥ್ 22 ರೈಡ್‌ಗಳಲ್ಲಿ 22 ಅಂಕ ಪಡೆದರು.
ಟರ್ನಿಂಗ್ ಪಾಯಿಂಟ್
40ನೇ ನಿಮಿಷದಲ್ಲಿ ಪವನ್ ಒಂದೇ ರೈಡ್‌ನಲ್ಲಿ 2 ಅಂಕ ಪಡೆದರು. ಆ ರೈಡ್‌ನಲ್ಲಿ ಪವನ್ ಔಟಾಗಿದ್ದರೆ, ಪಂದ್ಯ ಟೈಟಾನ್ಸ್ ಪಾಲಾಗುತ್ತಿತ್ತು.
ಶ್ರೇಷ್ಠ ರೈಡರ್: ಪವನ್, ಬುಲ್ಸ್, 22 ಅಂಕ
ಶ್ರೇಷ್ಠ ಡಿಫೆಂಡರ್: ಅಬೋಜರ್, ಟೈಟಾನ್ಸ್, 04 ಅಂಕ
ಪಾಟ್ನಾ ಪೈರೇಟ್ಸ್‌ಗೆ 10ನೇ ಸೋಲು
3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಸೋಲಿನ ಗೋಳು ಮುಂದುವರಿದಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಪಾಟ್ನಾ, ಯು.ಪಿ.ಯೋಧಾ ವಿರುದ್ಧ 29-41ರಲ್ಲಿ ಸೋಲುಂಡಿತು.
ಪ್ರದೀಪ್ 14 ಅಂಕ ಗಳಿಸಿದರೂ ತಂಡ ಗೆಲ್ಲಲಿಲ್ಲ. ಪಾಟ್ನಾಗಿದು 10ನೇ ಸೋಲಾಗಿದ್ದು, ತಂಡ ಪ್ಲೇ-ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
