Pankaj Advani: 25ನೇ ಬಾರಿಗೆ ಪಂಕಜ್‌ ಅಡ್ವಾಣಿ ವಿಶ್ವಚಾಂಪಿಯನ್

ಬೆಂಗಳೂರಿನ ಪಂಕಜ್ ಅಡ್ವಾನಿ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆ
ವೃತ್ತಿಬದುಕಿನ 25ನೇ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿ ಜಯಿಸಿದ ಪಂಕಜ್ ಅಡ್ವಾನಿ
ಫೈನಲ್‌ನಲ್ಲಿ ಭಾರತದವರೇ ಆದ ಸೌರವ್‌ ಕೊಠಾರಿ ವಿರುದ್ಧ ಜಯಭೇರಿ

Pankaj Advani wins 25th Worlds title in Kuala Lumpur kvn

ಕೌಲಾಲಂಪುರ(ಅ.09): ಭಾರತದ ತಾರಾ ಕ್ಯೂ ಸ್ಪೋರ್ಟ್ಸ್‌ ಆಟಗಾರ, ಬೆಂಗಳೂರಿಗ ಪಂಕಜ್‌ ಅಡ್ವಾಣಿ ಶನಿವಾರ ತಮ್ಮ ವೃತ್ತಿಬದುಕಿನ 25ನೇ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿ ಜಯಿಸಿದ್ದಾರೆ. ಬಿಲಿಯಾರ್ಡ್ಸ್ 150 ಅಪ್‌ ವಿಭಾಗದ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತದವರೇ ಆದ ಸೌರವ್‌ ಕೊಠಾರಿ ವಿರುದ್ಧ 4-0 ಅಂತರದಲ್ಲಿ ಗೆಲುವು ಸಾಧಿಸಿದರು.

ಬೆಸ್ಟ್‌ ಆಫ್‌ ಸೆವೆನ್‌ ಫೈನಲ್‌ನಲ್ಲಿ ಅಡ್ವಾಣಿ ಅತ್ಯುತ್ತಮ ಪ್ರದರ್ಶನ ತೋರಿದರು. ಸತತ 5ನೇ ವಿಶ್ವ ಚಾಂಪಿಯನ್‌ಶಿಪ್‌ ಗೆದ್ದಿರುವ ಪಂಕಜ್‌, ಈ ವರ್ಷ ಆಡಿರುವ ಎಲ್ಲಾ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದ್ದಾರೆ.

ಬಿಲಿಯಾರ್ಡ್‌ನಲ್ಲಿ ಪಂಕಜ್‌ಗೆ ಇದು 16ನೇ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿ. ಉಳಿದ 9 ಪ್ರಶಸ್ತಿಗಳನ್ನು ಸ್ನೂಕರ್‌ನಲ್ಲಿ ಗೆದ್ದಿದ್ದಾರೆ. 12 ವರ್ಷದ ಹಿಂದೆ ಕತಾರ್‌ನಲ್ಲಿ ಐಬಿಎಸ್‌ಎಫ್‌ 6-ರೆಡ್‌ ಸ್ನೂಕರ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಪಂಕಜ್‌ ಇದೀಗ ಮತ್ತೊಂದು ಚಿನ್ನ ಜಯಿಸಿದ್ದಾರೆ. ಭಾರತದವರೇ ಆದ ಎಸ್‌.ಶ್ರೀಕೃಷ್ಣ ಕಂಚಿನ ಪದಕ ಜಯಿಸಿದರು. ಟೂರ್ನಿಯಲ್ಲಿ ಭಾರತೀಯರು ಕ್ಲೀನ್‌ ಸ್ವೀಪ್‌ ಮಾಡಿದ್ದು ವಿಶೇಷ.

ನ್ಯಾಷನಲ್‌ ಗೇಮ್ಸ್‌: ರಾಜ್ಯದ ನವೀನ್‌ಗೆ ಸೈಕ್ಲಿಂಗ್‌ ಚಿನ್ನ

ಅಹಮದಾಬಾದ್‌: ಕರ್ನಾಟಕದ ತಾರಾ ಸೈಕ್ಲಿಂಗ್‌ ಪಟು ನವೀನ್‌ ಜಾನ್‌ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದೇ ವೇಳೆ ಒಲಿಂಪಿಯನ್‌ ಶ್ರೀಹರಿ ನಟರಾಜ್‌ 6ನೇ ಚಿನ್ನದೊಂದಿಗೆ ತಮ್ಮ ಅಭಿಯಾನ ಕೊನೆಗೊಳಿಸಿದ್ದಾರೆ. ಶನಿವಾರ ಕರ್ನಾಟಕ 5 ಪದಕ ಜಯಿಸಿತು. 23 ಚಿನ್ನ, 22 ಬೆಳ್ಳಿ, 35 ಕಂಚಿನೊಂದಿಗೆ ಒಟ್ಟು 80 ಪದಕ ಗೆದ್ದಿರುವ ಕರ್ನಾಟಕ, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.

ಪುರುಷರ 38 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಯಲ್‌ ಸ್ಪರ್ಧೆಯನ್ನು 49 ನಿಮಿಷ 01.635 ಸೆಕೆಂಡ್‌ಗಳಲ್ಲಿ ಮುಕ್ತಾಯಗೊಳಿಸಿದ ನವೀನ್‌ ಮೊದಲ ಸ್ಥಾನ ಪಡೆದರು. ಪುರುಷರ 100 ಮೀ. ಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಶ್ರೀಹರಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಮಿಶ್ರ ವಿಭಾಗದ 4*100 ಮೀ. ಮೆಡ್ಲೆ ರಿಲೇಯಲ್ಲಿ ಕರ್ನಾಟಕ ಬೆಳ್ಳಿ ಗೆದ್ದರೆ, ಮಹಿಳೆಯರ 100 ಮೀ. ಫ್ರೀ ಸ್ಟೈಲ್‌ನಲ್ಲಿ ರುಜುಲಾ ಕಂಚು ಪಡೆದರು.

Indian Super League ಬೆಂಗಳೂರು ಎಫ್‌ಸಿಗೆ ಜಯದ ಆರಂಭ

ಯೋಗಾಸನದಲ್ಲಿ ರಾಜ್ಯಕ್ಕೆ ಮತ್ತೊಂದು ಪದಕ ದೊರೆತಿದೆ. ಆರ್ಟಿಸ್ಟಿಕ್‌ ವಿಭಾಗದಲ್ಲಿ ಆದಿತ್ಯ ಪ್ರಕಾಶ್‌ ಬೆಳ್ಳಿ ಗೆದ್ದಿದ್ದಾರೆ. ಇನ್ನು ರಾಜ್ಯ ಪುರುಷರ ಹಾಕಿ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಗುಜರಾತ್‌ ವಿರುದ್ಧ 11-2ರಲ್ಲಿ ಗೆದ್ದು ಸೆಮೀಸ್‌ ಪ್ರವೇಶಿಸಿದೆ.

2023ರಲ್ಲಿ ಗೋವಾದಲ್ಲಿ 37ನೇ ರಾಷ್ಟ್ರೀಯ ಗೇಮ್ಸ್‌

ಅಹಮದಾಬಾದ್‌: 2023ರ ಅಕ್ಟೋಬರ್‌ನಲ್ಲಿ 37ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಗೋವಾದಲ್ಲಿ ನಡೆಸುವುದಾಗಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಘೋಷಿಸಿದೆ. ಮುಂದಿನ ವರ್ಷ ಚೀನಾದ ಹಾಂಗ್‌ಝುನಲ್ಲಿ ಸೆ.23-ಅ.8ರ ವರೆಗೆ ನಡೆಯಲಿರುವ 19ನೇ ಏಷ್ಯನ್‌ ಗೇಮ್ಸನ್ನು ಗಮನದಲ್ಲಿಟ್ಟುಕೊಂಡು ನ್ಯಾಷನಲ್‌ ಗೇಮ್ಸ್‌ನ ವೇಳಾಪಟ್ಟಿ ಸಿದ್ಧಪಡಿಸಲಾಗುವುದು ಎಂದು ಐಒಎ ತಿಳಿಸಿದೆ. 36ನೇ ರಾಷ್ಟ್ರೀಯ ಗೇಮ್ಸ್‌ ಗೋವಾದಲ್ಲೇ ನಡೆಯಬೇಕಿತ್ತು. ಆದರೆ ಮೂಲಸೌಕರ್ಯದ ಕೊರತೆ ಇದ್ದ ಕಾರಣ ಕ್ರೀಡಾಕೂಟವನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗಿತ್ತು.

Latest Videos
Follow Us:
Download App:
  • android
  • ios