Indian Super League ಬೆಂಗಳೂರು ಎಫ್‌ಸಿಗೆ ಜಯದ ಆರಂಭ
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬಿಎಫ್‌ಸಿ ಶುಭಾರಂಭ
ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ದ ಬಿಎಫ್‌ಸಿಗೆ ಭರ್ಜರಿ ಜಯ
ಬಿಎಫ್‌ಸಿ ಪರ ಗೋಲು ದಾಖಲಿಸಿದ ಆ್ಯಲನ್ ಕೋಸ್ಟಾ
ಬೆಂಗಳೂರು(ಅ.09): 9ನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ ಬೆಂಗಳೂರು ಎಫ್‌ಸಿ ಗೆಲುವಿನ ಆರಂಭ ಪಡೆದಿದೆ. ಶನಿವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿತು. 87ನೇ ನಿಮಿಷದಲ್ಲಿ ಆ್ಯಲನ್ ಕೋಸ್ಟಾಬಾರಿಸಿದ ಗೋಲು ಬಿಎಫ್‌ಸಿ ಪಾಲಿಗೆ ಗೆಲುವಿನ ಗೋಲಾಯಿತು.
ನಾರ್ಥ್‌ಈಸ್ಟ್ ಸ್ಟ್ರೈಕರ್‌ಗಳು ಎಷ್ಟೇ ಪ್ರಯತ್ನಿಸಿದರೂ ಬಿಎಫ್‌ಸಿ ರಕ್ಷಣಾ ಪಡೆಯನ್ನು ದಾಟಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಈ ಜಯದೊಂದಿಗೆ ಸುನಿಲ್ ಚೆಟ್ರಿ ಪಡೆ 3 ಅಂಕ ಕಲೆಹಾಕಿದೆ. ತಂಡವು ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 14ರಂದು ಚೆನ್ನೈಯನ್ ಎಫ್‌ಸಿ ವಿರುದ್ಧ ಆಡಲಿದೆ. ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.
ಪ್ರೊ ಕಬಡ್ಡಿ: ಕೋಟಿ ವೀರ ಪವನ್ ಶೆರಾವತ್‌ಗೆ ಗಾಯ
ಬೆಂಗಳೂರು: 2.26 ಕೋಟಿ ರು.ಗೆ ಹರಾಜಿನಲ್ಲಿ ಬಿಕರಿಯಾಗಿ, ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಎನ್ನುವ ದಾಖಲೆ ಬರೆದಿದ್ದ ‘ರೈಡ್ ಮಷಿನ್’ ಪವನ್ ಶೆರಾವತ್ 9ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗಾಯಗೊಂಡು ಹೊರಬಿದ್ದಿದ್ದಾರೆ. ಅವರು ಕೆಲ ವಾರಗಳ ಕಾಲ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದ್ದು, ತಮಿಳ್ ತಲೈವಾಸ್ ತಂಡ ಆತಂಕಕ್ಕೆ ಸಿಲುಕಿದೆ. ಕಳೆದ ಕೆಲ ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡದ ಆಧಾರಸ್ತಂಭ ಎನಿಸಿದ್ದ ಪವನ್, ಈ ಬಾರಿ ತಲೈವಾಸ್ ಪಾಲಾದಾಗಲೇ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿತ್ತು. ಇದೀಗ ಮೊದಲ ಪಂದ್ಯದಲ್ಲೇ ಗಾಯಗೊಂಡಿರುವುದು ಕಬಡ್ಡಿ ಅಭಿಮಾನಿಗಳಲ್ಲಿ ಮತ್ತಷ್ಟು ಬೇಸರಕ್ಕೆ ಕಾರಣವಾಗಿದೆ.
Pro Kabaddi League ಗುಜರಾತ್ ಜೈಂಟ್ಸ್ ಹಾಗೂ ತಮಿಳ್ ತಲೈವಾಸ್ ಪಂದ್ಯವೂ ಟೈನಲ್ಲಿ ಅಂತ್ಯ!
ಶನಿವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರೈಡರ್ ಚಂದ್ರನ್ ರಂಜಿತ್‌ರನ್ನು ಹಿಡಿಯುವ ಯತ್ನದಲ್ಲಿ ಪವನ್‌ರ ಬಲ ಮೊಣಕಾಲು ಗಾಯಗೊಂಡಿತು. ಅತಿಯಾದ ನೋವಿನಿಂದ ನರಳಿದ ಪವನ್‌ರನ್ನು ಸ್ಟೆ್ರಚರ್‌ನಲ್ಲಿ ಅಂಕಣದಿಂದ ಹೊರ ಕರೆದೊಯ್ಯಲಾಯಿತು. ಕ್ರೀಡಾಂಗಣದಲ್ಲೇ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ತಂಡದ ಸಿಬ್ಬಂದಿ ಸ್ಕಾ್ಯನ್‌ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು.
ಒಂದೇ ದಿನ ಡಬಲ್ ಟೈ!
ಬೆಂಗಳೂರು: ಶನಿವಾರ ಪ್ರೊ ಕಬಡ್ಡಿ 9ನೇ ಆವೃತ್ತಿಯ ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು. ದಿನದ ಮೊದಲೆರಡು ಪಂದ್ಯಗಳು ಟೈನಲ್ಲಿ ಕೊನೆಗೊಂಡವು. ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ 34-34ರಲ್ಲಿ ಡ್ರಾಗೆ ತೃಪ್ತಿಪಟ್ಟರೆ, ಪವನ್‌ರನ್ನು ಕಳೆದುಕೊಂಡು ಆಘಾತಕ್ಕೊಳಗಾದ ತಲೈವಾಸ್ 31-31ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಟೈಗೆ ಸಮಾಧಾನಪಟ್ಟುಕೊಂಡಿತು.
ಪುಣೆ ಹಾಗೂ ಪಾಟ್ನಾ ಸಮಬಲದ ಹೋರಾಟ ಪ್ರದರ್ಶಿಸಿದವು. ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದರೂ 20 ನಿಮಿಷಗಳ ಮುಕ್ತಾಯಕ್ಕೆ ಪುಣೆ 23-16ರ ಮುನ್ನಡೆ ಪಡೆಯಿತು. ಆದರೆ ದ್ವಿತೀಯಾರ್ಧದಲ್ಲಿ 5 ನಿಮಿಷಗಳಲ್ಲಿ 8 ಅಂಕ ಗಳಿಸಿದ ಪಾಟ್ನಾ ಮೇಲುಗೈ ಸಾಧಿಸಿತು. ಆದರೆ ಕೊನೆಯಲ್ಲಿ ಎರಡೂ ತಂಡಗಳಿಗೆ ಗೆಲುವು ಸಿಗಲಿಲ್ಲ.
ಇನ್ನು ಗುಜರಾತ್-ತಲೈವಾಸ್ ಪಂದ್ಯವೂ ರೋಚಕವಾಗಿತ್ತು. ಎರಡೂ ಅವಧಿಗಳಲ್ಲಿ ಸಮಬಲದ ಹೋರಾಟ ಕಂಡುಬಂತು. ಗುಜರಾತ್‌ನ ರಾಕೇಶ್ 13 ರೈಡ್ ಅಂಕ ಪಡೆದರೆ, ತಲೈವಾಸ್ ನರೇಂದರ್ 10 ರೈಡ್ ಅಂಕ ಗಳಿಸಿದರು