ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಟ್ರೋಫಿಗಾಗಿ ಸೆಣಸಾಡಲಿದೆ. ಭಾರತ ತಂಡವು ಜನವರಿ 13ರಂದು ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್'ಗಳ ಜಯ ದಾಖಲಿಸಿತ್ತು.

ದುಬೈ(ಜ.17): 5ನೇ ಆವೃತ್ತಿಯ ಅಂಧರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್‌'ನಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್‌'ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಟ್ರೋಫಿಗಾಗಿ ಸೆಣಸಾಡಲಿದೆ. ಭಾರತ ತಂಡವು ಜನವರಿ 13ರಂದು ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್'ಗಳ ಜಯ ದಾಖಲಿಸಿತ್ತು.

ಇಲ್ಲಿನ ಅಜ್ಮಾನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಸೆಮೀಸ್‌'ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 256 ರನ್‌'ಗಳಿಗೆ ಆಲೌಟ್ ಆಯಿತು. ಸುಲಭ ಗುರಿ ಬೆನ್ನಟ್ಟಿದ ಭಾರತ ಕೇವಲ 23 ಓವರ್‌'ಗಳಲ್ಲಿ ಜಯದ ನಗೆ ಬೀರಿತು.

ಗಣೇಶ್ ಮಧುಕರ್ ಶತಕ: ಭಾರತಕ್ಕೆ ಗಣೇಶ್ ಮಧುಕರ್, ದೀಪಕ್ ಮಲ್ಲಿಕ್ ಮತ್ತು ನರೇಶ್ ಪ್ರಭಾವಿ ಬ್ಯಾಟಿಂಗ್ ನಡೆಸಿ ನೆರವಾದರು. ಬಾಂಗ್ಲಾದ ಬೌಲರ್‌'ಗಳಿಗೆ ದಿಟ್ಟ ಉತ್ತರ ನೀಡಿದ ಈ ಮೂವರು ಆಟಗಾರರು ತಂಡದ ಗೆಲುವನ್ನು ಸುಲಭಗೊಳಿಸಿದರು. ಪಂದ್ಯದುದ್ದಕ್ಕೂ ಅದ್ಭುತ ಬ್ಯಾಟಿಂಗ್ ನಡೆಸಿದ ಗಣೇಶ್ ಕೇವಲ 69 ಎಸೆತಗಳಲ್ಲಿ 112 ರನ್‌'ಗಳಿಸಿದರು. 43 ಎಸೆತಗಳಲ್ಲಿ 53 ರನ್‌'ಗಳಿಸಿದ ದೀಪಕ್ ಮಲ್ಲಿಕ್ ಗಾಯಗೊಂಡು ನಿವೃತ್ತಿ ಪಡೆದರು. ನಂತರ ನರೇಶ್ ಕೇವಲ 18 ಎಸೆತಗಳಲ್ಲಿ 40 ರನ್‌'ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಇದಕ್ಕೂ ಮುನ್ನ ಅಬ್ದುಲ್ ಮಲ್ಲಿಕ್ ಅವರ ಭರ್ಜರಿ ಶತಕದ ನೆರವಿನಿಂದ ಬಾಂಗ್ಲಾದೇಶ ಉತ್ತಮ ಮೊತ್ತ ದಾಖಲಿಸಿತು. ಭಾರತ ಪರ ದುರ್ಗಾ ರಾವ್ 3, ದೀಪಕ್ ಮಲ್ಲಿಕ್ ಮತ್ತು ಕರ್ನಾಟಕದ ಪ್ರಕಾಶ್ ಜಯರಾಮಯ್ಯ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ 256/10(32.5 ಓ)

(ಅಬ್ದುಲ್ ಮಲ್ಲಿಕ್ 108, ದುರ್ಗಾ ರಾವ್ 20/3)

ಭಾರತ 259/3

(ಗಣೇಶ್ 112, ದೀಪಕ್ 53)