ಟೋಕಿಯೋ(ಆ.18): ಭಾರತ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು, ಶನಿವಾರದಿಂದ ಇಲ್ಲಿ ಆರಂಭವಾಗಿರುವ ಒಲಿಂಪಿಕ್‌ ಪರೀಕ್ಷಾರ್ಥ ಟೂರ್ನಿಯಲ್ಲಿ ಶುಭಾರಂಭ ಮಾಡಿವೆ. ಪುರುಷರ ತಂಡ ಮಲೇಷ್ಯಾ ವಿರುದ್ಧ 6-0 ಗೋಲುಗಳಿಂದ ಗೆದ್ದರೆ, ಮಹಿಳಾ ತಂಡ ಜಪಾನ್‌ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿತು.

ಮಲೇಷ್ಯಾ ವಿರುದ್ಧ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ವರುಣ್‌ ಕುಮಾರ್‌ (9ನೇ ನಿ.), ಗುರು ಸಾಹಿಬ್‌ಜಿತ್‌ ಸಿಂಗ್‌ (18, 56ನೇ ನಿ.), ಮನ್‌ದೀಪ್‌ ಸಿಂಗ್‌ (34, 47ನೇ ನಿ.) ಹಾಗೂ ಕನ್ನಡಿಗ ಎಸ್‌.ವಿ. ಸುನಿಲ್‌ (60ನೇ ನಿ.) ಗೋಲು ಗಳಿಸಿದರು.

ಭಾರತ ಹಾಕಿ ತಂಡಕ್ಕೆ ಕನ್ನಡಿಗ ಸುನಿಲ್‌ ವಾಪಸ್‌

ಮಹಿಳಾ ತಂಡ ಜಪಾನ್‌ ವಿರುದ್ಧ ರೋಚಕ ಗೆಲುವು ಪಡೆಯಿತು. 9ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಪೆನಾಲ್ಟಿಕಾರ್ನರ್‌ ಮೂಲಕ ಗೋಲು ಗಳಿಸಿದರು. 16ನೇ ನಿಮಿಷದಲ್ಲಿ ಜಪಾನ್‌ ಸಮಬಲ ಸಾಧಿಸಿತು. ಆದರೆ 35ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌ ಪೆನಾಲ್ಟಿಕಾರ್ನರ್‌ ಮೂಲಕ ಮತ್ತೊಂದು ಗೋಲು ಗಳಿಸಿ, ಭಾರತದ ಗೆಲುವಿಗೆ ಕಾರಣರಾದರು.