ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಜೋಕೋವಿಚ್‌ ಸಿನ್ನರ್‌ ವಿರುದ್ಧ ಸೋಲು ಅನುಭವಿಸಿದರು. ಸಿನ್ನರ್‌ ಮೊದಲ ಬಾರಿಗೆ ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ ಮತ್ತು ಅಮಾಂಡ ಫೈನಲ್‌ನಲ್ಲಿ ಸೆಣಸಲಿದ್ದಾರೆ.

ಲಂಡನ್‌: 25ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆಲ್ಲಬೇಕು ಎನ್ನುವ ನೋವಾಕ್‌ ಜೋಕೋವಿಚ್‌ರ ಕನಸು ಮತ್ತೆ ಭಗ್ನಗೊಂಡಿದೆ. ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸರ್ಬಿಯಾದ ಟೆನಿಸ್‌ ದೊರೆ ಜೋಕೋವಿಚ್‌ಗೆ ವಿಶ್ವ ನಂ.1, ಇಟಲಿಯ ಯಾನ್ನಿಕ್‌ ಸಿನ್ನರ್‌ ವಿರುದ್ಧ 3-6, 3-6, 4-6 ನೇರ ಸೆಟ್‌ಗಳಲ್ಲಿ ಸೋಲು ಎದುರಾಯಿತು.

ಶುಕ್ರವಾರ ನಡೆದ ಪಂದ್ಯ ಸಂಪೂರ್ಣವಾಗಿ ಏಕಪಕ್ಷೀಯವಾಗಿ ಸಾಗಿತು. ಜೋಕೋವಿಚ್‌ ವಿರುದ್ಧ ಸತತ 5ನೇ ಗೆಲುವು ಸಾಧಿಸಿದ ಸಿನ್ನರ್‌, ಮೊದಲ ಬಾರಿಗೆ ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿದರು.

2023ರ ಯುಎಸ್‌ ಓಪನ್‌ ಗೆಲ್ಲುವ ಮೂಲಕ 24 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಪೂರೈಸಿದ್ದ ಜೋಕೋವಿಚ್‌ಗೆ ಆ ಬಳಿಕ ಮತ್ತೊಂದು ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. 2024ರ ವಿಂಬಲ್ಡನ್‌ ಫೈನಲ್‌ನಲ್ಲಿ ಎಡವಿದ್ದ ಜೋಕೋ, ಈ ಬಾರಿ ಸೆಮೀಸ್‌ನಲ್ಲೇ ಮುಗ್ಗರಿಸಿದ್ದಾರೆ. ಇನ್ನು, ಜೋಕೋವಿಚ್‌ ಈ ವರ್ಷ ಆಡಿರುವ ಮೂರೂ ಗ್ರ್ಯಾನ್‌ ಸ್ಲಾಂಗಳಲ್ಲಿ ಸೆಮೀಸ್‌ನಲ್ಲೇ ಸೋತಿದ್ದಾರೆ.

ಇದೇ ವೇಳೆ, ಮೊದಲ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಸ್ಪೇನ್‌ನ ಕಾರ್ಲೋಸ್‌ ಆಲ್ಕರಜ್‌ ಅಮೆರಿಕದ ಟೇಲರ್‌ ಫ್ರಿಟ್ಜ್‌ ವಿರುದ್ಧ 6-4, 5-7, 6-3, 7-6 (8/6) ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಸತತ 3ನೇ ಬಾರಿಗೆ ಫೈನಲ್‌ಗೇರಿದರು. ಆಲ್ಕರಜ್‌ ಹ್ಯಾಟ್ರಿಕ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಇಂದು ಇಗಾ vs ಅಮಾಂಡ ಫೈನಲ್

ಮಹಿಳಾ ಸಿಂಗಲ್ಸ್‌ನ ಫೈನಲ್‌ನಲ್ಲಿ ಶನಿವಾರ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಹಾಗೂ ಅಮೆರಿಕದ ಅಮಾಂಡ ಅನಿಸಿಮೊವಾ ಸೆಣಸಲಿದ್ದಾರೆ. ಈ ಬಾರಿ ಯಾರೇ ಚಾಂಪಿಯನ್ ಆದರೂ, ವಿಂಬಲ್ಡನ್‌ನಲ್ಲಿ ಸತತ 8ನೇ ವರ್ಷ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ಚಾಂಪಿಯನ್ ಉದಯಿಸಿದಂತಾಗುತ್ತದೆ. 5 ಗ್ರಾನ್ ಸ್ಲಾಂ ವಿಜೇತೆ ಸ್ವಿಯಾಟೆಕ್, ಚೊಚ್ಚಲ ವಿಂಬಲ್ಡನ್ ಗೆಲ್ಲುವ ಗುರಿ ಹೊಂದಿದ್ದಾರೆ.

ಇನ್ನು ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಫೈನಲ್‌ಗೇರಿರುವ ಅಮಾಂಡ, ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಆಗುವ ವಿಶ್ವಾಸದಲ್ಲಿದ್ದಾರೆ. ವಿಶೇಷವೆಂದರೆ ಈ ಇಬ್ಬರು ಆಟಗಾರ್ತಿಯರು ಇದೇ ಮೊದಲ ಬಾರಿಗೆ ಪರಸ್ಪರ ಸೆಣಸಲಿದ್ದಾರೆ. ಇಗಾ ಈ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ನೇರ ಸೆಟ್‌ಗಳಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲೂ ಅವರೇ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗುವ ಆಟಗಾರ್ತಿಗೆ ಬರೋಬ್ಬರಿ 30 ಲಕ್ಷ ಪೌಂಡ್ (ಅಂದಾಜು 34.75 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ.

ಡೋಪಿಂಗ್‌: ಶಾಟ್‌ ಪುಟ್‌ ತಾರೆ ಜಾಸ್ಮೀನ್‌ ಸಸ್ಪೆಂಡ್‌

ನವದೆಹಲಿ: ನಿಷೇಧಿತ ಪದಾರ್ಥ ಸೇವನೆ ಹಿನ್ನೆಲೆಯಲ್ಲಿ ಭಾರತದ ಶಾಟ್‌ಪುಟ್‌ ಆಟಗಾರ್ತಿ ಜಾಸ್ಮೀನ್‌ ಕೌರ್‌ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ)ದಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ. ಇತ್ತೀಚೆಗೆ ಡೆಹ್ರಾಡೂನ್‌ನಲ್ಲಿ ನಡೆದ ನ್ಯಾಷನಲ್‌ ಗೇಮ್ಸ್‌ನಲ್ಲಿ 22 ವರ್ಷದ ಜಾಸ್ಮೀನ್‌ ಚಿನ್ನದ ಪದಕ ಗೆದ್ದಿದ್ದರು. ಅವರ ರಕ್ತದ ಮಾದರಿಯಲ್ಲಿ ನಿಷೇಧಿತ ಟರ್ಬುಟ್ಯಾಲಿನ್‌ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಅಂಡರ್‌-20 ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತ ಕುಸ್ತಿಪಟು ನಿತಿಕಾ, ಜೂನಿಯರ್‌ ವಿಶ್ವ ಚಾಂಪಿಯನ್‌ ರೀತಿಕಾ ಹೂಡಾ ಸಹ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದರು.