ಟೆನಿಸ್ ಪಟು ರಾಧಿಕಾ ಯಾದವ್ ದೇಹಕ್ಕೆ 3 ಗುಂಡುಗಳು ಹೊಕ್ಕಿವೆ. ಸ್ವಂತ ತಂದಯೇ ಮಗಳ ಮೇಲೆ 5 ಸುತ್ತಿನ ಗುಂಡು ಹಾರಿಸಿದ್ದಾರೆ. ರಾಧಿಕಾ ಸ್ಥಳದಲ್ಲೆ ಮೃತಪಟ್ಟರೆ, ತಂದೆ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಾರಣವೂ ಬಹಿರಂಗವಾಗಿದೆ. 

ಗುರುಗಾಂವ್ (ಜು.10) ಹರ್ಯಾಣ ರಾಜ್ಯದ ಟೆನಿಸ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದ ರಾಧಿಕಾ ಯಾದವ್ ದುರಂತ ಅಂತ್ಯ ಕಂಡಿದ್ದಾಳೆ. ಸ್ವಂತ ತಂದಯೇ ಮಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಗುರುಗಾಂವ್‌ನ ಸೆಕ್ಟರ್ 57 ಮನೆಯಲ್ಲೇ ಈ ಘಟನೆ ನಡೆದಿದೆ. ತಂದೆ ಹಾರಿಸಿದ 5 ಸುತ್ತುಗಳ ಗುಂಡಿನಲ್ಲಿ ಮೂರು ರಾಧಿಕಾ ದೇಹ ಹೊಕ್ಕಿದೆ. ಸ್ಥಳದಲ್ಲೇ ರಾಧಿಕಾ ಯಾದವ್ ಮೃತಪಟ್ಟಿದ್ದಾರೆ. ಇತ್ತ ತಂದೆ ಪೊಲೀಸರಿಗೆ ಶರಣಾಗಿದ್ದಾರೆ.

ಮಗಳ ಮೇಲೆ ತಂದೆ ಗುಂಡು ಹಾರಿಸಿದ್ದೇಕೆ?

ಟೆನಿಸ್ ಪ್ಲೇಯರ್ ಆಗಿದ್ದ ರಾಧಿಕಾ ಯಾದವ್ ಹರ್ಯಾಣ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಳು. ಟೆನಿಸ್ ಅಕಾಡೆಮಿ ನಡೆಸುತ್ತಿದ್ದ ರಾಧಿಕಾ ಬಗ್ಗೆ ತಂದೆ ತೀವ್ರ ಅಸಮಾಧಾನಗೊಂಡಿದ್ದರು. ಟೆನಿಸ್ ಅಕಾಡೆಮಿ ಮುಚ್ಚುವಂತೆ ಸೂಚಿಸಿದ್ದರು. ಆದರೆ ತಂದೆ ಮಾತನ್ನು ಧಿಕ್ಕರಿಸಿದ್ದ ಕಾರಣ ಕಳದ ಕೆಲ ದಿನಗಳಿಂದ ವಾಗ್ವಾದ ನೆಡೆದಿತ್ತು. ಇದೇ ಕಾರಣದಿಂದ ಇಂದು (ಜು.10) ಮತ್ತೆ ಜಗಳವಾಗಿದೆ. ಕೋಪಗೊಂಡ ತಂದೆ ರಿವಾಲ್ವರ್‌ನಿಂದ ಗುಂಡಿಕ್ಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ರಾಧಿಕಾ ಯಾದವ್ ಟೆನಿಸ್ ಆಸಕ್ತಿ ಕಳೆದುಕೊಂಡಿದ್ದು ಮಾತ್ರವಲ್ಲ, ಹೆಚ್ಚಿನ ಸಮಯ ರೀಲ್ಸ್, ಸೋಶಿಯಲ್ ಮೀಡಿಯಾದಲ್ಲಿ ಕಳೆಯಲು ಆರಂಭಿಸಿದ್ದಾಳೆ. ಇದು ತಂದೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವರು ಬಾರಿ ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಇಂದು ರಾಧಿಕಾ ಯಾದವ್ ಮಾಡಿದ್ದ ಒಂದು ರೀಲ್ಸ್ ತಂದೆ ಸಹನೆ ಕಟ್ಟೆ ಒಡೆದಿದೆ. ಈ ರೀಲ್ಸ್ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಸಭ್ಯತೆ ಮೀರಿ ಹೋಗಬಾರದು ಎಂದು ಕಿವಿ ಮಾತು ಹೇಳಿದ್ದರು. ಇದೇ ವಿಚಾರವಾಗಿ ಜಗಳವಾಗಿ ಹತ್ಯೆ ನಡೆದಿದೆ ಅನ್ನೋ ಮಾತುಗಳು ಕೇಳಿಬಂದಿದೆ. 

ವಾಗ್ವಾದ ಬಳಿಕ ರಾಧಿಕಾ ಯಾಧವ್ ಅಡುಗೆ ಕೋಣೆಗೆ ತೆರಳಿದ ವೇಳೆ ತಂದೆ ಗುಂಡಿನ ಮಳೆ ಸುರಿಸಿರುವುದಾಗಿ ಪ್ರಾಥಮಿಕ ಮೂಲಗಳು ಹೇಳುತ್ತಿದೆ. ರಾಧಿಕಾ ದೇಹದ ಹಿಂದಿನಿಂದ 3 ಗುಂಡುಗಳು ದೇಹ ಹೊಕ್ಕಿದೆ ಎಂದು ಪೊಲೀಸ್ ವರದಿ ಹೇಳುತ್ತಿದೆ.

ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

ಮನೆಯಲ್ಲಿ ಗುಂಡಿನ ಶಬ್ದ ಕೇಳಿಸುತ್ತಿದ್ದಂತೆ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಓಡೋಡಿ ಬಂದ ಕುಟುಂಬಸ್ಥರು ರಾಧಿಕಾ ಯಾದವ್‌ನ ತಕ್ಷಣೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರಾಧಿಕಾ ಯಾದವ್ ಬದುಕುಳಿಯಲಿಲ್ಲ. ತೀವ್ರಗಾಯಗಳಿಂದ ರಾಧಿಕಾ ಯಾದವ್ ಮೃತಪಟ್ಟಿದ್ದಾಳೆ.

ಪೊಲೀಸರಿಗೆ ಮಾಹಿತಿ ನೀಡಿದ ಆಸ್ಪತ್ರೆ

ರಾಧಿಕಾ ಯಾದವ್‌ನ ತುರ್ತು ನಿಘಾ ಘಟಕಕ್ಕೆ ದಾಖಲಿಸಲಾಗಿತ್ತು. ಒಂದೆಡೆ ತುರ್ತು ಚಿಕಿತ್ಸೆ ಆರಂಭಗೊಂಡರೆ ಮತ್ತೊಂದೆಡೆ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದಾರೆ. ಅಷ್ಟರಲ್ಲಿ ರಾಧಿಕಾ ಯಾದವ್ ಮೃತಪಟ್ಟಿದ್ದಾರೆ. ಕುಟುಂಬಸ್ಥರ ವಿಚಾರಿಸಿದ ಪೊಲೀಸರಿಗೆ ತಂದೆ ಸಿಡಿಸಿದ ಗುಂಡಿನಿಂದ ರಾಧಿಕಾ ಮೃತಪಟ್ಟಿದ್ದಾಳೆ ಅನ್ನೋದು ತಿಳಿದಿದೆ. ಬಳಿಕ ರಾಧಿಕಾ ತಂದೆಯನ್ನು ಪೊಲೀಸರು ಅರಸ್ಟೆ ಮಾಡಿದ್ದಾರೆ.

ಸಭ್ಯತೆ ಮೀರಿದ ರೀಲ್ಸ್‌ನಿಂದ ರೊಚ್ಚಿಗೆದ್ದ ತಂದೆ ಮಗಳನ್ನೇ ಗುಂಡಿಕ್ಕಿ ಕೊಂದ ಘಟನೆಯಿಂದ ಇಡೀ ಕುಟುಂಬ ಶಾಕ್ ಆಗಿದೆ. ವಾಗ್ವಾದ ತೀವ್ರ ಸ್ವರೂಪಕ್ಕೆ ಹೋದ ಕಾರಣ ತಂದೆಯೇ ಮಗಳನ್ನು ಗುಂಡಿಕ್ಕ ಹತ್ಯೆ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಧಿಕಾ ಯಾದವ್ ಮನೆಯಿಂದ ಲೈಸೆನ್ಸ್ ರಿವಾಲ್ವರ್, ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.