ವಿಂಬಲ್ಡನ್‌ನಲ್ಲಿ ಜೋಕೋವಿಚ್‌ ಗೆಲುವು ಸಾಧಿಸಲಿದ್ದಾರೆ ಎಂದು ವಿರಾಟ್‌ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೋಕೋವಿಚ್‌ ಮತ್ತು ಆಲ್ಕರಾಜ್‌ ನಡುವೆ ಫೈನಲ್‌ ನಡೆಯಬೇಕೆಂದು ಅವರು ಆಶಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಸಬಲೆಂಕಾ ಚಾಂಪಿಯನ್‌ ಆಗುವ ಸಾಧ್ಯತೆ ಇದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಲಂಡನ್‌: 24 ಬಾರಿ ಗ್ರ್ಯಾನ್‌ಸ್ಲಾಂ ಗೆದ್ದಿರುವ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಈ ಬಾರಿ ವಿಂಬಲ್ಡನ್‌ ಗೆಲ್ಲಲಿ ಎಂದು ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಸೋಮವಾರ ಜೋಕೋವಿಚ್‌ರ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಕ್ರೀಡಾಂಗಣದಲ್ಲಿ ತಮ್ಮ ಪತ್ನಿ ಜೊತೆಗೆ ವೀಕ್ಷಿಸಿದ ಕೊಹ್ಲಿ, ಬಳಿಕ ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌ ಜೊತೆ ಮಾತನಾಡಿದರು.

‘ತುಂಬಾ ಸಮಯದಿಂದ ಜೋಕೋವಿಚ್‌ ಜೊತೆ ಸಂಪರ್ಕದಲ್ಲಿದ್ದೇನೆ. ನಾವು ಪರಸ್ಪರ ಮೆಸೇಜ್‌ ಮಾಡುತ್ತೇವೆ. ಫೈನಲ್‌ನಲ್ಲಿ ಜೋಕೋವಿಚ್‌ ಮತ್ತು ಕಾರ್ಲೊಸ್‌ ಆಲ್ಕರಜ್‌ ಆಡಬೇಕೆಂದು ಬಯಸುತ್ತೇನೆ ಮತ್ತು ಜೋಕೋ ಗೆಲ್ಲುವ ಭರವಸೆಯಿದೆ. ಅದು ಅವರ ವೃತ್ತಿಬದುಕಿನ ಅತ್ಯದ್ಭುತ ಸಾಧನೆಯಾಗಲಿದೆ. ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು’ ಎಂದು ಕೊಂಡಾಡಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಸೋಮವಾರ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ 11 ಶ್ರೇಯಾಂಕಿತ ಅಲೆಕ್ಸ್ ಡಿ ಮಿನೂರ್ ಹಾಗೂ ನೋವಾಕ್ ಜೋಕೋವಿಚ್ ನಡುವಿನ ಪಂದ್ಯವನ್ನು ವೀಕ್ಷಿಸಿದರು. ಇನ್ನು ಇದೇ ಸಂದರ್ಭದಲ್ಲಿ ಭಾರತದ ಟೆನಿಸ್ ದಂತಕಥೆ ವಿಜಯ್ ಅಮೃತ್‌ರಾಜ್ ಜತೆಗಿನ ಮಾತುಕತೆ ವೇಳೆ ಜೋಕೋವಿಚ್ ಜತೆಗಿನ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದರು.

ಇನ್ನು ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಅರೈನಾ ಸಬಲೆಂಕಾ ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಸಬಲಂಕಾ ವಿಶ್ವದ ನಂ.1 ಆಟಗಾರ್ತಿಯಾಗಿದ್ದು, ಸಹಜವಾಗಿಯೇ ಟ್ರೋಫಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಸಬಲೆಂಕಾ ಅವರನ್ನು ಸೋಲಿಸುವುದು ಕಷ್ಟ. ಅವರು ಆಕ್ರಮಣಕಾರಿಯಾಗಿ ಆಡುವ ಸಾಮರ್ಥ್ಯವಿದೆ. ಹೀಗಾಗಿ ಅವರನ್ನು ಪ್ರಶಸ್ತಿಯಿಂದ ತಡೆಯುವುದು ಸುಲಭವಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ವಿಶ್ವ ನಂ.1 ಸಬಲೆಂಕಾ ಸೆಮಿಫೈನಲ್‌ಗೆ ಎಂಟ್ರಿ

ಚೊಚ್ಚಲ ಬಾರಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಚಾಂಪಿಯನ್‌ ಆಗುವ ನಿರೀಕ್ಷೆಯಲ್ಲಿರುವ ವಿಶ್ವ ನಂ.1 ಅರೈನಾ ಸಬಲೆಂಕಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲಾರಸ್‌ನ ಸಬೆಲಂಕಾ ಅವರು ಶ್ರೇಯಾಂಕರಹಿತ, ಜರ್ಮನಿಯ ಲಾರಾ ಸೀಗೆಮಂಡ್ ವಿರುದ್ಧ 4-6, 6-2, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು.

ಮೊದಲ ಸೆಟ್‌ ಕಳೆದುಕೊಂಡ ಸಬಲೆಂಕಾ, 3ನೇ ಸೆಟ್‌ನಲ್ಲಿ ಒಂದು ಹಂತದಲ್ಲಿ 1-3ರಿಂದ ಹಿನ್ನಡೆಯಲ್ಲಿದ್ದರು. ಆದರೆ ಸೋಲೊಪ್ಪಲು ತಯಾರಿಲ್ಲದ ಸಬಲೆಂಕಾ ಟೂರ್ನಿಯಲ್ಲಿ 3ನೇ ಬಾರಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಅಂತಿಮ 4ರ ಘಟ್ಟದಲ್ಲಿ 19ನೇ ಶ್ರೇಯಾಂಕಿತೆ, ರಷ್ಯಾದ ಸಮ್ಸೊನೋವಾ ಸವಾಲು ಎದುರಾಗಲಿದೆ.

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ 5ನೇ ಶ್ರೇಯಾಂಕಿತ, ಅಮೆರಿಕದ ಟೇಲರ್‌ ಫ್ರಿಟ್ಜ್‌ ಸೆಮಿಫೈನಲ್‌ಗೇರಿದರು. ಚೊಚ್ಚಲ ಗ್ರ್ಯಾನ್‌ಸ್ಲಾಂ ಕನಸಿನಲ್ಲಿರುವ 27 ವರ್ಷದ ಫ್ರಿಟ್ಜ್‌ ಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾದ ಕರೇನ್‌ ಕಚನೋವ್ ವಿರುದ್ಧ 6-3, 6-4, 1-6, 7-6(7-4) ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.

ನಂ.1 ಸಿನ್ನರ್‌ಗೆ ಕ್ವಾರ್ಟರ್‌ಗೆ ಲಗ್ಗೆ

ಪುರುಷರ ಸಿಂಗಲ್ಸ್‌ನ ಹಾಲಿ ವಿಶ್ವ ನಂ.1 ಆಟಗಾರ, ಇಟಲಿಯ ಯಾನಿಕ್‌ ಸಿನ್ನರ್‌ ಕ್ವಾರ್ಟರ್‌ ಫೈನಲ್‌ಗೇರಿದರು. ಪ್ರಿ ಕ್ವಾರ್ಟರ್‌ನಲ್ಲಿ ಸಿನ್ನರ್‌ 19ನೇ ಶ್ರೇಯಾಂಕಿತ, ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೋವ್‌ ವಿರುದ್ಧ ವಾಕ್‌ಓವರ್‌ ಪಡೆದರು. ಸಿನ್ನರ್‌ 6-2, 7-5, 2-2ರಲ್ಲಿ ಮುಂದಿದ್ದಾಗ ಡಿಮಿಟ್ರೋವ್‌ ಗಾಯಗೊಂಡು ಹೊರಬಿದ್ದರು.

ರೆಸ್ಲರ್‌ ರೀತಿಕಾ ಸಸ್ಪೆಂಡ್‌!

ನವದೆಹಲಿ: 2023ರಲ್ಲಿ ಭಾರತದ ಮೊದಲ ಅಂಡರ್‌-23 ವಿಶ್ವ ಚಾಂಪಿಯನ್‌ ಎನಿಸಿಕೊಂಡಿದ್ದ ತಾರಾ ಕುಸ್ತಿಪಟು ರೀತಿಕಾ ಹೂಡಾ ಡೋಪಿಂಗ್‌ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ. ಮಾ.15ರಂದು ಏಷ್ಯನ್‌ ಚಾಂಪಿಯನ್‌ಶಿಪ್‌ ಟ್ರಯಲ್ಸ್‌ ವೇಳೆ ರೀತಿಕಾ ಮೂತ್ರದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ನಿಷೇಧಿತ ಪದಾರ್ಥ ಸೇವಿಸಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಅಮಾನತಾಗಿದ್ದಾರೆ.