ಪೋರ್ಟ್ ಆಫ್ ಸ್ಪೇನ್(ಆ.17):  ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಕ್ರೀಸ್‌ನಲ್ಲಿದ್ದರೆ ಸಾಕು, ಎದುರಾಳಿಗಳಿಗೆ ನಡುಕ ಶುರುವಾಗುತ್ತೆ. ಕಾರಣ ಧೋನಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅಸಾಧ್ಯ ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಧೋನಿ ಬೌಲರ್‌ಗಳ ದಂಡಿಸುತ್ತಲೇ ಬಂದಿದ್ದಾರೆ. ಈ ಮೂಲಕ 297 ಪಂದ್ಯದಿಂದ 6075 ರನ್ ಸಿಡಿಸಿದ್ದಾರೆ. ವಿಶೇಷ ಅಂದರೆ 267 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಭಾರತದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧೋನಿ ಗರಿಷ್ಠ ಸಿಕ್ಸರ್ ದಾಖಲೆಯನ್ನ ನ್ಯೂಜಿಲೆಂಡ್ ಕ್ರಿಕೆಟಿಗ ರಾಸ್ ಟೇಲರ್ ಬ್ರೇಕ್ ಮಾಡಿದ್ದಾರೆ. ಕೆರೀಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ರಾಸ್ ಟೇಲರ್ ಟಿ20 ಕ್ರಿಕೆಟ್‌ನಲ್ಲಿ 271 ಸಿಕ್ಸರ್ ಸಿಡಿಸೋ ಮೂಲಕ ಧೋನಿ ದಾಖಲೆಯನ್ನ ಪುಡಿಮಾಡಿದ್ದಾರೆ.

ಜೈಮೈಕ ತೈಲ್ವಾಸ್ ಪರ ಆಡುತ್ತಿರುವ ರಾಸ್ ಟೇಲರ್ ಒಟ್ಟು 248 ಟಿ20 ಪಂದ್ಯಗಳಿಂದ 271 ಸಿಕ್ಸರ್ ಬಾರಿಸಿದ್ದಾರೆ. ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ವೆಸ್ಟ್ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಗೇಲ್ 338 ಪಂದ್ಯಗಳಿಂದ 857 ಸಿಕ್ಸರ್ ಸಿಡಿಸಿದ್ದಾರೆ.