ಕ್ಲ್ಯಾಸಿಕ್ ಜಾವೆಲಿನ್ ಥ್ರೋ ಕ್ರೀಡಾಕೂಟಕ್ಕೆ ಪಾಕಿಸ್ತಾನದ ಅರ್ಷದ್ ನದೀಂರನ್ನು ಆಹ್ವಾನಿಸಿದ್ದಕ್ಕೆ ನೀರಜ್ ಚೋಪ್ರಾ ಟೀಕೆಗೆ ಗುರಿಯಾಗಿದ್ದಾರೆ. ದೇಶಪ್ರೇಮವನ್ನು ಪ್ರಶ್ನಿಸುವುದು ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ಪಹಲ್ಗಾಮ್ ದಾಳಿಗೂ ಮುನ್ನ ಆಹ್ವಾನ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಮೇ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕ್ಲ್ಯಾಸಿಕ್ ಜಾವೆಲಿನ್ ಥ್ರೋ ಕ್ರೀಡಾಕೂಟಕ್ಕೆ ಪಾಕಿಸ್ತಾನದ ಜಾವೆಲಿನ್ ಪಟು ಅರ್ಷದ್ ನದೀಂರನ್ನು ಆಹ್ವಾನಿಸಿದ್ದಕ್ಕೆ ಡಬಲ್ ಒಲಿಂಪಿಕ್ ಪದಕ ವಿಜೇತ, ಭಾರತದ ನೀರಜ್ ಚೋಪ್ರಾ ಭಾರಿ ಟೀಕೆ, ನಿಂದನೆ ಎದುರಿಸುತ್ತಿದ್ದಾರೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚೋಪ್ರಾ, 'ದೇಶದ ಹಿತಾಶಕ್ತಿಗೆ ನಾನು ಮೊದಲ ಆದ್ಯತೆ ನೀಡುತ್ತೇನೆ. ಆದರೆ ನನ್ನ ದೇಶಪ್ರೇಮವನ್ನು ಪ್ರಶ್ನಿಸುವುದು ನೋವುಂಟು ಮಾಡಿದೆ' ಎಂದಿದ್ದಾರೆ.

ತಮ್ಮ ವಿರುದ್ಧದ ಟೀಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ನೀರಜ್, 'ಪಹಲ್ಗಾಮ್ ದಾಳಿಗೂ 2 ದಿನಗಳ ಮೊದಲೇ ವಿಶ್ವದ ಬಹುತೇಕ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿದೆ. ಒಬ್ಬ ಕ್ರೀಡಾಪಟುವಾಗಿ ಪಾಕ್‌ನ ಅರ್ಶದ್ರರನ್ನೂ ಆಹ್ವಾನಿಸಿದ್ದೇನೆ. ಆದರೆ ಇದಕ್ಕಾಗಿ ದ್ವೇಷದ ಸಂದೇಶ, ನಿಂದನೆಗಳು ಬರುತ್ತಿವೆ. ನನ್ನ ಕುಟುಂಬವನ್ನೂ ಗುರಿಪಡಿಸಲಾಗುತ್ತಿದೆ. ವರ್ಷದ ಹಿಂದೆ ನನ್ನ ತಾಯಿಯ ಹೇಳಿಕೆ ಬಗ್ಗೆ ಪ್ರಶಂಸಿಸಿದ್ದ ಜನರೇ, ಈಗ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ' ಎಂದು ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಜಾವೆಲಿನ್ ಕೂಟ: ನೀರಜ್‌ ಚೋಪ್ರಾ ಆಹ್ವಾನ ತಿರಸ್ಕರಿಸಿದ ಪಾಕಿಸ್ತಾನದ ನದೀಂ ಅರ್ಶದ್‌!

ನಾನು ಕಡಿಮೆ ಮಾತನಾಡುವ ವ್ಯಕ್ತಿ. ಆದರೆ ನಾನು ತಪ್ಪು ಎಂದು ಭಾವಿಸುವುದರ ವಿರುದ್ಧ ಮಾತನಾಡುವುದಿಲ್ಲ ಎಂದರ್ಥವಲ್ಲ, ದೇಶಪ್ರೇಮದ ಬಗ್ಗೆ ಪ್ರಶ್ನೆ ಎದುರಾದರೆ ಮತ್ತು ನನ್ನ ಕುಟುಂಬದ ಗೌರವಕ್ಕೆ ಧಕ್ಕೆಯಾದರೆ ಮಾತನಾಡದೆ ಇರಲು ಸಾಧ್ಯವಿಲ್ಲ' ಎಂದಿದ್ದಾರೆ. 

'ಪಹಲ್ಗಾಮ್ ಘಟನೆಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡವರ ಜೊತೆ ನಾನಿದ್ದೇನೆ. ಇದಕ್ಕೆ ಭಾರತದ ಪ್ರತಿಕ್ರಿಯೆಯು ಒಂದು ರಾಷ್ಟ್ರವಾಗಿ ನಮ್ಮ ಶಕ್ತಿಯನ್ನು ತೋರಿಸುತ್ತದೆ ಮತ್ತು ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ' ಎಂದು ನೀರಜ್ ಹೇಳಿದ್ದಾರೆ.

ನೀರಜ್‌ ಚೋಪ್ರಾ ಆಹ್ವಾನ ತಿರಸ್ಕರಿಸಿದ ಪಾಕಿಸ್ತಾನದ ನದೀಂ ಅರ್ಶದ್‌

ಚೊಚ್ಚಲ ಆವೃತ್ತಿಯ ಎನ್‌ಸಿ ಕ್ಲ್ಯಾಸಿಕ್‌(ನೀರಜ್‌ ಚೋಪ್ರಾ ಕ್ಲ್ಯಾಸಿಕ್‌) ಜಾವೆಲಿನ್‌ ಥ್ರೋ ಕೂಟದಲ್ಲಿ ಪಾಲ್ಗೊಳ್ಳುವಂತೆ ಹಾಲಿ ಒಲಿಂಪಿಕ್‌ ಚಾಂಪಿಯನ್‌, ಪಾಕಿಸ್ತಾನದ ನದೀಂ ಅರ್ಶದ್‌ಗೆ 2 ಬಾರಿ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ ಆಹ್ವಾನ ನೀಡಿದ್ದರು. ಆದರೆ ಇದನ್ನು ಅರ್ಶದ್‌ ತಿರಸ್ಕರಿಸಿದ್ದಾರೆ. ಮೇ 22ರಂದು ಏಷ್ಯನ್ ಅಥ್ಲೆಟಿಕ್ಸ್‌ಗಾಗಿ ಕೊರಿಯಾಗೆ ತೆರಳಲಿರುವ ಕಾರಣ ಮೇ 24ರ ಬೆಂಗಳೂರಿನ ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿ ಎದುರು ಸೋಲಿನ ಬೆನ್ನಲ್ಲೇ ತಲೆಕೆಡಿಸಿಕೊಂಡು ಬಾರ್ ಕಡೆ ಹೋದ ರಾಯಲ್ಸ್ ಓನರ್! ವಿಡಿಯೋ ವೈರಲ್

ರಾಷ್ಟ್ರೀಯ ಅಥ್ಲೆಟಿಕ್ಸ್‌: ಮತ್ತೆ 4 ಮೆಡಲ್‌ ಗೆದ್ದ ಕರ್ನಾಟಕ

ಕೊಚ್ಚಿ: ಇಲ್ಲಿ ಗುರುವಾರ ಕೊನೆಗೊಂಡ ಫೆಡರೇಶನ್‌ ಕಪ್‌ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಒಟ್ಟು 7 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನ ರಾಜ್ಯಕ್ಕೆ 4 ಪದಕಗಳು ಲಭಿಸಿದವು.

ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ರಾಜ್ಯದ ಇಬ್ಬರು ಪದಕ ಜಯಿಸಿದರು. ಕರಿಶ್ಮಾ ಸನಿಲ್‌ 52.73 ಮೀಟರ್‌ ದೂರ ದಾಖಲಿಸಿ ಬೆಳ್ಳಿ ಗೆದ್ದರೆ, ರಮ್ಯಶ್ರೀ ಜೈನ್‌(51.17 ಮೀ.) ಕಂಚು ತಮ್ಮದಾಗಿಸಿಕೊಂಡರು. ಉತ್ತರ ಪ್ರದೇಶದ ಅನ್ನು ರಾಣಿ(56.66 ಮೀ.) ಚಿನ್ನಕ್ಕೆ ಮುತ್ತಿಟ್ಟರು. ಮಹಿಳೆಯರ ಹೈಜಂಪ್‌ನಲ್ಲಿ ಅಭಿನಯ ಶೆಟ್ಟಿ 1.80 ಮೀ. ಎತ್ತರಕ್ಕೆ ನೆಗೆದು ಕಂಚು ಗೆದ್ದರೆ, 200 ಮೀ. ಓಟದಲ್ಲಿ ಸುದೀಕ್ಷಾ 24.31 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕಂಚಿಗೆ ತೃಪ್ತಿಪಟ್ಟುಕೊಂಡರು.

ಇದಕ್ಕೂ ಮುನ್ನ ಪುರುಷರ 100 ಮೀ.ನಲ್ಲಿ ಮಣಿಕಂಠ ಕಂಚು,\B ಮಹಿಳೆಯರ 100 ಮೀ. ಓಟದಲ್ಲಿ ಸ್ನೇಹಾ ಕಂಚು, ಪುರುಷರ 400 ಮೀಟರ್‌ ಹರ್ಡಲ್ಸ್‌ನಲ್ಲಿ ಯಶಸ್‌ ಪಿ. ಚಿನ್ನ ಗೆದ್ದಿದ್ದರು.