ಅಂತಾರಾಜ್ಯ ಅಥ್ಲೆಟಿಕ್ಸ್ ಕೂಟ: ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದ ಶ್ರೀಶಂಕರ್
* ಹಂಗೇರಿಯ ಬೂಡಾಪೆಸ್ಟ್ನಲ್ಲಿ ನಡೆಯಲಿರುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದ ಶ್ರೀಶಂಕರ್
* ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲು 8.25 ಮೀ. ದೂರ ಜಿಗಿಯಬೇಕಿತ್ತು
* ಶ್ರೀಶಂಕರ್ 8.41 ಮೀ. ದೂರಕ್ಕೆ ಜಿಗಿದು ಅಗ್ರಸ್ಥಾನದೊಂದಿಗೆ ಫೈನಲ್ಗೇರಿದರು
ಭುವನೇಶ್ವರ(ಜೂ.19): ಭಾರತದ ತಾರಾ ಲಾಂಜ್ಜಂಪ್ ಪಟು ಶ್ರೀಶಂಕರ್ ಮುರಳಿ ಆಗಸ್ಟ್ನಲ್ಲಿ ಹಂಗೇರಿಯ ಬೂಡಾಪೆಸ್ಟ್ನಲ್ಲಿ ನಡೆಯಲಿರುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದ್ದಾರೆ. ಭಾನುವಾರ ಇಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಕೂಟದ ಅರ್ಹತಾ ಸುತ್ತಿನಲ್ಲಿ ಶ್ರೀಶಂಕರ್ 8.41 ಮೀ. ದೂರಕ್ಕೆ ಜಿಗಿದು ಅಗ್ರಸ್ಥಾನದೊಂದಿಗೆ ಫೈನಲ್ಗೇರಿದರು.
ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲು 8.25 ಮೀ. ದೂರ ಜಿಗಿಯಬೇಕಿತ್ತು. ಇದನ್ನು ಮುರಳಿ ಮೊದಲ ಪ್ರಯತ್ನದಲ್ಲೇ ಸಾಧಿಸಿದರೂ ಕೇವಲ 1 ಸೆಂ. ಮೀ. ಅಂತರದಲ್ಲಿ ರಾಷ್ಟ್ರೀಯ ದಾಖಲೆಯಿಂದ ವಂಚಿತರಾದರು. ಮಾರ್ಚ್‌ನಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ನಡೆದಿದ್ದ ಅಥ್ಲೆಟಿಕ್ಸ್ ಕೂಟದಲ್ಲಿ ಜೆಸ್ವಿನ್ ಆಲ್ಡಿರನ್ 8.42 ಮೀ. ದೂರಕ್ಕೆ ಜಿಗಿದು ರಾಷ್ಟ್ರೀಯ ದಾಖಲೆ ಬರೆದಿದ್ದರು.
ಜಾವೆಲಿನ್: ಮನು ಫೈನಲ್ಗೆ
ಪುರುಷರ ಜಾವೆಲಿನ್ ಎಸೆತದಲ್ಲಿ ಕರ್ನಾಟಕದ ಡಿ.ಪಿ.ಮನು ಫೈನಲ್ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅವರು 76.21 ಮೀ. ದೂರಕ್ಕೆ ಎಸೆದು 5ನೇ ಸ್ಥಾನಿಯಾದರು. ಇದೇ ವೇಳೆ ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಸಿಂಚಲ್ ಕಾವೇರಮ್ಮ, ಪುರುಷರ ವಿಭಾಗದಲ್ಲಿ ಪಿ.ಯಶಸ್, 200 ಮೀ. ಓಟದಲ್ಲಿ ಶಶಿಕಾಂತ್ ವೀರೂಪಾಕ್ಷ, ಪುರುಷರ ಲಾಂಗ್ ಜಂಪ್‌ನಲ್ಲಿ ಸಿದ್ಧಾಥ್‌ರ್ ಮೋಹನ್, ಎಸ್.ಲೋಕೇಶ್ ಫೈನಲ್ ಪ್ರವೇಶಿಸಿದ್ದಾರೆ. ಕೂಟದ ಕೊನೆ ದಿನವಾದ ಸೋಮವಾರ ಫೈನಲ್ ಸ್ಪರ್ಧೆಗಳು ನಡೆಯಲಿವೆ.
Wrestlers Protest ಬಬಿತಾರಿಂದ ಕುಸ್ತಿ ಹೋರಾಟಕ್ಕೆ ಧಕ್ಕೆ: ಸಾಕ್ಷಿ ಮಲಿಕ್
ರಾಜ್ಯದ ಸಂದೇಶ್‌ಗೆ ಏಷ್ಯಾಡ್ ಅರ್ಹತೆ
ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ಮತ್ತೆರಡು ಪದಕ ಬಾಚಿಕೊಂಡಿದೆ. ಜೊತೆಗೆ ರಾಜ್ಯದ ಜೆಸ್ಸಿ ಸಂದೇಶ್ ಹೈಜಂಪ್‌ನಲ್ಲಿ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಶನಿವಾರ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಸಂದೇಶ್ 2.24 ಮೀ. ಎತ್ತರಕ್ಕೆ ನೆಗೆದು ಬೆಳ್ಳಿ ಗೆದ್ದರೆ, ಮಹಾರಾಷ್ಟ್ರದ ಸರ್ವೇಶ್ ಕೂಡಾ 2.24 ಎತ್ತರಕ್ಕೆ ನೆಗೆದು ಚಿನ್ನ ಪಡೆದರು. ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯಲು 2.24 ಮೀ. ಎತ್ತರ ನೆಗೆಯಬೇಕಿದ್ದು, ಇಬ್ಬರೂ ಕೂಟಕ್ಕೆ ಪ್ರವೇಶ ಪಡೆದರು. ಇನ್ನು, ಮಹಿಳೆಯರ ಪೋಲ್ ವಾಲ್ಟ್ನಲ್ಲಿ ರಾಜ್ಯದ ಸಿಂಧುಶ್ರೀ 3.80 ಮೀ. ಎತ್ತರಕ್ಕೆ ನೆಗೆದು ಬೆಳ್ಳಿ ಜಯಿಸಿದರು.
ಜ್ಯೋತಿಗೆ 2ನೇ ಚಿನ್ನ
ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ 12.92 ಸೆಕೆಂಡ್ಗಳಲ್ಲಿ ಕ್ರಮಿಸಿದ ಆಂಧ್ರದ ಜ್ಯೋತಿ ಯರ್ರಾಜಿ ಕೂಟದ 2ನೇ ಚಿನ್ನ ಗೆಲ್ಲುವುದರ ಜೊತೆಗೆ ಏಷ್ಯನ್ ಗೇಮ್ಸ್‌ಗೂ ಅರ್ಹತೆ ಗಿಟ್ಟಿಸಿದರು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಮೇಧಾ ರಾಜೇಶ್ ಕಾಮತ್(13.89 ಸೆ.) 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. 2022ರ ಕಾಮನ್‌ವೆಲ್ತ್ ಗೇಮ್ಸ್‌ನ ಹೈಜಂಪ್‌ನಲ್ಲಿ ಕಂಚು ಗೆದ್ದಿದ್ದ ತೇಜಸ್ವಿನ್ ಶಂಕರ್ ಈಗ ಡೆಕಾಥ್ಲಾನ್ ಸ್ಪರ್ಧಿಯಾಗಿದ್ದು, ಅಂತಾರಾಜ್ಯ ಕೂಟದಲ್ಲಿ ಚಿನ್ನ ಗೆದ್ದ ದೆಹಲಿ ಅಥ್ಲೀಟ್ ಏಷ್ಯಾಡ್‌ಗೆ ಅರ್ಹತೆ ಪಡೆದರು.
ಲೂಝಾನ್ ಡೈಮಂಡ್ ಲೀಗ್: ನೀರಜ್ ಸ್ಪರ್ಧೆ
ನವದೆಹಲಿ: ಗಾಯದಿಂaದ ಚೇತರಿಸಿಕೊಂಡಿರುವ ಒಲಿಂಪಿಕ್ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಜೂ.30ರಂದು ಸ್ವಿಜರ್‌ಲೆಂಡ್‌ನ ಲೂಝಾನ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದರೆ. ತಮ್ಮ ಸ್ಪರ್ಧೆ ಬಗ್ಗೆ ನೀರಜ್ ಇನ್ನೂ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಮೇ 5ರಂದು ನಡೆದಿದ್ದ ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಮೊದಲ ಸ್ಥಾನ ಪಡೆದಿದ್ದರು.