* ರಾಷ್ಟ್ರೀಯ ಗೇಮ್ಸ್‌ನಲ್ಲಿ ಭರ್ಜರಿ ಶುಭಾರಂಭ ಮಾಡಿದ ಕರ್ನಾಟಕ* ಮೊದಲ ದಿನ  2 ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದ್ದಿರುವ ಕರ್ನಾಟಕ* ಕರ್ನಾಟಕ, ಪದಕ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದೆ

ಅಹಮದಾಬಾದ್‌(ಅ.01): 36ನೇ ರಾಷ್ಟ್ರೀಯ ಕ್ರೀಡಾಕೂಟದ 2ನೇ ದಿನವಾದ ಶುಕ್ರವಾರ ಕರ್ನಾಟಕಕ್ಕೆ ಒಟ್ಟು 5 ಪದಕ ದೊರೆತಿದೆ. 2 ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದ್ದಿರುವ ಕರ್ನಾಟಕ, ಪದಕ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿದೆ. 

ಮಹಿಳೆಯರ ಹೈಜಂಪ್‌ನಲ್ಲಿ ರಾಜ್ಯದ ಅಭಿನಯ ಶೆಟ್ಟಿ1.81 ಮೀ. ಎತ್ತರಕ್ಕೆ ಜಿಗಿದು 2ನೇ ಸ್ಥಾನ ಪಡೆದರು. 1.83 ಮೀ. ಎತ್ತರಕ್ಕೆ ನೆಗೆದ ಮಧ್ಯಪ್ರದೇಶದ ಸ್ವಪ್ನಾ ಬರ್ಮನ್‌ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಮಹಿಳೆಯರ 10 ಮೀ. ಏರ್‌ ರೈಫಲ್‌ ಚಿನ್ನದ ಪದಕದ ಪಂದ್ಯದಲ್ಲಿ ವಿಶ್ವ ನಂ.37 ಗುಜರಾತ್‌ನ ಇಳವೆನಿಲ್‌ ವಳರಿವನ್‌ ವಿರುದ್ಧ 10-16ರಲ್ಲಿ ಸೋತ ರಾಜ್ಯದ ತಿಲೋತ್ತಮ ಸೇನ್‌ ಬೆಳ್ಳಿಗೆ ತೃಪ್ತಿಪಟ್ಟರು.

ಇನ್ನು ಮಹಿಳೆಯರ ನೆಟ್‌ಬಾಲ್‌ ಕಂಚಿನ ಪದಕದ ಪಂದ್ಯದಲ್ಲಿ ರಾಜ್ಯ ತಂಡ ಬಿಹಾರ ವಿರುದ್ಧ 57-57ರಲ್ಲಿ ಸಮಬಲ ಸಾಧಿಸಿತು. ಎರಡೂ ತಂಡಗಳಿಗೆ ಪದಕ ವಿತರಿಸಲಾಯಿತು. ಟೆನಿಸ್‌ ತಂಡ ವಿಭಾಗದಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳಾ ತಂಡಗಳು ಸೆಮಿಫೈನಲ್‌ನಲ್ಲಿ ಪರಾಭವಗೊಂಡು ಕಂಚಿಗೆ ತೃಪ್ತಿಪಟ್ಟವು. ಪುರುಷರ ತಂಡ ಮಹಾರಾಷ್ಟ್ರ ವಿರುದ್ಧ 1-2ರ ಅಂತರದಲ್ಲಿ ಸೋಲುಂಡರೆ, ಮಹಿಳಾ ತಂಡ ಗುಜರಾತ್‌ ವಿರುದ್ಧ 0-2ರಲ್ಲಿ ಸೋಲುಂಡಿತು.

ದಸರಾ ಕ್ರೀಡಾಕೂಟಕ್ಕೆ ಒಲಿಂಪಿಕ್ಸ್‌ ಪದಕ ವಿಜೇತೆ ಸಾಕ್ಷಿ ಮಲ್ಲಿಕ್‌ ಚಾಲನೆ

ಒಂದೇ ದಿನ 7 ಕೂಟ ದಾಖಲೆ!

ಶುಕ್ರವಾರ ಒಟ್ಟು 7 ನೂತನ ಕೂಟ ದಾಖಲೆಗಳಿಗೆ ಕ್ರೀಡಾಕೂಟ ಸಾಕ್ಷಿಯಾಯಿತು. ಪುರುಷರ 1500 ಮೀ. ಓಟದಲ್ಲಿ ಸರ್ವಿಸಸ್‌ನ ಪರ್ವೇಜ್‌ ಖಾನ್‌, ಟ್ರಿಪಲ್‌ ಜಂಪ್‌ನಲ್ಲಿ ತಮಿಳುನಾಡಿನ ಪ್ರವೀಣ್‌ ಚಿತ್ರಾವೇಲ್‌, ಹ್ಯಾಮರ್‌ಥ್ರೋನಲ್ಲಿ ಪಂಜಾಬ್‌ನ ದಮ್ನೀತ್‌ ಸಿಂಗ್‌, ಮಹಿಳೆಯರ ಹೈಜಂಪ್‌ನಲ್ಲಿ ಮಧ್ಯಪ್ರದೇಶದ ಸ್ವಪ್ನಾ, ಶಾಟ್‌ಪುಟ್‌ನಲ್ಲಿ ಉತ್ತರ ಪ್ರದೇಶದ ಕಿರಣ್‌ ಬಲ್ಯಾನ್‌, ಮಹಿಳೆಯರ 20 ಕಿ.ಮೀ. ವೇಗದ ನಡಿಗೆಯಲ್ಲಿ ಉತ್ತರ ಪ್ರದೇಶದ ಮುನಿತಾ, ಪುರುಷರ 100 ಮೀ. ಓಟದ ಸೆಮೀಸ್‌ನಲ್ಲಿ ಅಸ್ಸಾಂನ ಅಮ್ಲಾನ್‌ ಬೊರ್ಗೊಹೈನ್‌ ಕೂಟದ ದಾಖಲೆ ನಿರ್ಮಿಸಿದರು.

Scroll to load tweet…

ಕರ್ನಾಟಕ ತಂಡ ಚಾಂಪಿಯನ್‌ ಅಖಿಲ ಭಾರತ ಅಂಚೆ ವಾಲಿಬಾಲ್‌

ಬೆಂಗಳೂರು: 35ನೇ ಅಖಿಲ ಭಾರತ ಅಂಚೆ ವಾಲಿಬಾಲ್‌ ಟೂರ್ನಿಯಲ್ಲಿ ಆತಿಥೇಯ ಕರ್ನಾಟಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ಕಳೆದ ಬಾರಿಯ ಚಾಂಪಿಯನ್‌ ಹಿಮಾಚಲ ಪ್ರದೇಶ ವಿರುದ್ಧ 3-0(25-20, 25-21, 25-15) ಸೆಟ್‌ಗಳಲ್ಲಿ ಜಯಗಳಿಸಿತು.

ಕರ್ನಾಟಕ ತಂಡವನ್ನು ಭಾರತ ರಾಷ್ಟ್ರೀಯ ತಂಡದ ನಾಯಕ ಎ. ಕಾರ್ತಿಕ್‌ ಮುನ್ನಡೆಸಿದರು. ವಿನಾಯಕ್‌ ರೋಖಡೆ, ಕೆ.ಗಣೇಶ, ಮಂಜುನಾಥ್‌, ಸೂರಜ್‌, ಪವನ್‌ ಪ್ರಭು, ಆಂಟೋನಿ, ಎ.ಸತೀಶ್‌ , ಬಿ.ಎಸ್‌.ಮನೋಹರ್‌, ಕೆ.ಪವನ್‌, ರೈಸನ್‌ ಬೆನೆಟ್‌ ಮತ್ತು ಎಸ್‌.ಎ.ಕಾರ್ತಿಕ್‌ ತಂಡದಲ್ಲಿದ್ದರು. ಸೆಮಿಫೈನಲ್‌ನಲ್ಲಿ ಕರ್ನಾಟಕ ಪಶ್ಚಿಮ ಬಂಗಾಳ ವಿರುದ್ಧ 3-0 ಸೆಟ್‌ಗಳಲ್ಲಿ ಜಯಿಸಿತ್ತು.

ಇಂದಿನಿಂದ ರಾಜ್ಯ ಕಿರಿಯರ ಬಾಸ್ಕೆಟ್‌ಬಾಲ್‌ ಟೂರ್ನಿ

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ(ಕೆಎಸ್‌ಬಿಎ) ಆಯೋಜಿಸುತ್ತಿರುವ ರಾಜ್ಯ ಮಟ್ಟದ ಕಿರಿಯರ (ಅಂಡರ್‌-18) ಬಾಸ್ಕೆಟ್‌ಬಾಲ್‌ ಟೂರ್ನಿ ಅ.1ರಿಂದ ಆರಂಭಗೊಳ್ಳಲಿದೆ. ಅ.8ರ ವರೆಗೂ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಬಾಲಕರ ವಿಭಾಗದಲ್ಲಿ 50, ಬಾಲಕಿಯರ ವಿಭಾಗದಲ್ಲಿ 39 ತಂಡಗಳು ಸ್ಪರ್ಧಿಸಲಿವೆ.