ಲಂಡನ್[ಮೇ.24]: ವಿಶ್ವಕಪ್ ಕ್ರಿಕೆಟ್ ಮಹಾಸಂಗ್ರಾಮಕ್ಕೆ ಇನ್ನು ಕೇವಲ ಒಂದು ವಾರ ಬಾಕಿ ಉಳಿದಿದೆ. 12ನೇ ಏಕದಿನ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಆತಿಥ್ಯ ವಹಿಸಿದ್ದು, ಮೇ.30ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

ಟೆಸ್ಟ್ ಆಡುವ ಅಗ್ರ 10 ತಂಡಗಳು ವಿಶ್ವಕಪ್ ಪ್ರಶಸ್ತಿಗಾಗಿ ಕಾದಾಡಲಿದ್ದು, ಎಲ್ಲಾ ಕ್ರಿಕೆಟಿಗರು ತಮ್ಮ ದೇಶಕ್ಕೆ ವಿಶ್ವಕಪ್ ಗೆದ್ದುಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಬಾರಿ ರೌಂಡ್ ರಾಬಿನ್ ಮಾದರಿಯ ಟೂರ್ನಿಯಾಗಿದ್ದು, ಒಂದು ತಂಡವು ಉಳಿದ 9 ತಂಡಗಳ ವಿರುದ್ಧ ಸೆಣಸಲಿವೆ. ಟೂರ್ನಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಈ ಬಾರಿಯ ವಿಶ್ವಕಪ್’ನಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಆರು ಆಟಗಾರರ ಹೆಸರನ್ನು ಪಟ್ಟಿ ಮಾಡಿದ್ದಾರೆ. ಇದರಲ್ಲಿ ಇಬ್ಬರು ಭಾರತದ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್, ರಶೀದ್ ಖಾನ್ ಮತ್ತು ಜಸ್ಪ್ರೀತ್ ಬುಮ್ರಾ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಲಿದ್ದಾರೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್‌: 200 ದೇಶಗಳಲ್ಲಿ ಪ್ರಸಾರ

ಕ್ರಿಸ್ ಗೇಲ್ ಪಾಲಿಗೆ ಇದು ಬಹುತೇಕ ಕಡೆಯ ವಿಶ್ವಕಪ್ ಆಗಿರುವುದರಿಂದ ಸ್ಮರಣೀಯವಾಗಿಸಿಕೊಳ್ಳಲು ಯತ್ನಿಸಲಿದ್ದಾರೆ. ಇನ್ನು ಮತ್ತೋರ್ವ ವಿಂಡೀಸ್ ಕ್ರಿಕೆಟಿಗ ಆ್ಯಂಡ್ರೆ ರಸೆಲ್ ಕೂಡಾ ಅಬ್ಬರಿಸಲಿದ್ದಾರೆ. ಇನ್ನು ಆಪ್ಘಾನಿಸ್ತಾನದ ರಶೀದ್ ಖಾನ್ ಸೀಮಿತ ಓವರ್ ಕ್ರಿಕೆಟ್’ನಲ್ಲಿ ತಾವೆಷ್ಟು ಪರಿಣಾಮಕಾರಿ ಬೌಲರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಹುಸೇನ್ ಹೇಳಿದ್ದಾರೆ. ಇನ್ನು ಮತ್ತೋರ್ವ ಬೌಲರ್ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಡೆತ್ ಓವರ್’ನಲ್ಲಿ ಪರಿಣಾಮಕಾರಿಯಾಗಿ ಯಾರ್ಕರ್ ದಾಳಿ ನಡೆಸುವ ಮೂಲಕ ಮಿಂಚುತ್ತಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಯಾವುದೇ ಮೂಲೆಗಳಲ್ಲಿ ಅನಾಯಾಸವಾಗಿ ರನ್ ಕಲೆಹಾಕುತ್ತಿದ್ದು, ಈ ಬಾರಿ ಜಾದೂ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ವಿಶ್ವಕಪ್ ಬಗೆಗಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...