ಸಿಡ್ನಿ(ಜ.10): ಜ.12ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಭಾರೀ ಸಿದ್ಧತೆ ನಡೆಸಿದೆ. ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ, ಶಿಖರ್ ಧವನ್, ಅಂಬಟಿ ರಾಯುಡು, ರೋಹಿತ್ ಶರ್ಮಾ, ಕೇದಾರ್ ಜಾಧವ್, ಯಜುವೇಂದ್ರ ಚಹಲ್, ದಿನೇಶ್ ಕಾರ್ತಿಕ್ ಮತ್ತು ಖಲೀಲ್ ಅಹ್ಮದ್, ಈಗಾಗಲೇ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. 

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದ ನೆಟ್ಸ್‌ನಲ್ಲಿ ಧೋನಿ, ಧವನ್, ಜಾಧವ್ ಮತ್ತು ರಾಯುಡು, ಕಠಿಣ ಅಭ್ಯಾಸ ನಡೆಸಿದರು. ಅಭ್ಯಾಸದ ವೇಳೆ ಅನುಭವಿ ಬೌಲರ್’ಗಳಿಲ್ಲದೇ  ಇದ್ದುದರಿಂದ ನಾಲ್ವರೂ, ಥ್ರೋ ಡೌನ್ ಎಸೆತಗಳನ್ನು ಎದುರಿಸಿದರು. ಇದೇ ವೇಳೆ ಧೋನಿ, ಸಹಾಯಕ ಕೋಚ್ ಸಂಜಯ್ ಬಾಂಗರ್ ಅವರ ನೆರವಿನಿಂದ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಧವನ್ ಮತ್ತು ರಾಯುಡು, ಬಲಗೈ ಮತ್ತು ಎಡಗೈ ಥ್ರೋ ಡೌನ್ ತಜ್ಞರನ್ನು ಎದುರಿಸಿದರು. 

ಏಕದಿನದಲ್ಲಿ ಭಾರತಕ್ಕೆ ನಂ.1 ಚಾನ್ಸ್..!

2018ರ ನವೆಂಬರ್‌ನಲ್ಲಿ ಭಾರತ ತಂಡ ತವರಿನಲ್ಲಿ ಕೊನೆಯ ಬಾರಿಗೆ ವಿಂಡೀಸ್ ವಿರುದ್ಧ ಏಕದಿನ ಸರಣಿ ಆಡಿತ್ತು. 2019ರ ಮೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ, ಆಸ್ಟ್ರೇಲಿಯಾ ಸರಣಿ ಬಳಿಕ ನ್ಯೂಜಿಲೆಂಡ್ ವಿರುದ್ಧ 5 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಿದೆ.