ದುಬೈ(ಜ.10): ಭಾರತ ಕ್ರಿಕೆಟ್ ತಂಡಕ್ಕೆ ಏಕದಿನ ರಾರ‍ಯಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವ ಸುವರ್ಣಾವಕಾಶ ದೊರೆತಿದೆ. ಹೌದು ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಜಯಿಸುವ ಮೂಲಕ  ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆಯಬಹುದಾಗಿದೆ.

ಸದ್ಯ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್ 126 ರೇಟಿಂಗ್ ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದೆ. ಭಾರತ ತಂಡ 121 ರೇಟಿಂಗ್ ಅಂಕಗಳಿಸಿ 2ನೇ ಸ್ಥಾನದಲ್ಲಿದೆ. ಮುಂಬರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಎಲ್ಲಾ 8 ಪಂದ್ಯಗಳಲ್ಲೂ ಭಾರತ ಜಯಭೇರಿ ಬಾರಿಸಿದರೆ, ನಂ.1 ಸ್ಥಾನಕ್ಕೇರಲಿದೆ. ಜ. 12 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಸರಣಿ ಹಾಗೂ ಜ. 23 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಕ್ಲೀನ್ ಸ್ವೀಪ್ ಸಾಧನೆ ಮಾಡಬೇಕಿದೆ. ಆದಾಗ್ಯೂ ಭಾರತ 125 ರೇಟಿಂಗ್ ಅಂಕ ಪಡೆಯಲಿದೆ. ಇಂಗ್ಲೆಂಡ್‌ಗಿಂತ 1 ಅಂಕದಿಂದ ಹಿನ್ನಡೆಯಲಿದೆ. ಇಂಗ್ಲೆಂಡ್ ತಂಡ, ವೆಸ್ಟ್ ಇಂಡೀಸ್ ವಿರುದ್ಧದ  ಏಕದಿನ ಸರಣಿಯಲ್ಲಿ ಹಿನ್ನಡೆ ಅನುಭವಿಸಿದರೆ ಭಾರತ ತಂಡ ಏಕದಿನ ರ‍್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಲಿದೆ. ಇದೇ ವೇಳೆ ಪಾಕಿಸ್ತಾನ ತಂಡ, 3ನೇ ಸ್ಥಾನಕ್ಕೇರಬೇಕಾದರೆ, ದಕ್ಷಿಣ ಆಫ್ರಿಕಾವನ್ನು 5-0 ಅಂತರದಿಂದ ಪರಾಭವಗೊಳಿಸಬೇಕು.

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಪೂಜಾರ ವಿಶ್ವ ನಂ.3

ಟಿ20 ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ 126 ರೇಟಿಂಗ್ ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಪಾಕಿಸ್ತಾನ, 138 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಟಿ20ಯಲ್ಲಿ ಅಗ್ರಸ್ಥಾನ ಪಡೆಯಲು ಭಾರತಕ್ಕೆ ಸಾಕಷ್ಟು ಕಾಲವಕಾಶ ಬೇಕಿದೆ. ಕೊಹ್ಲಿ ನೇತೃತ್ವದ ಭಾರತ ತಂಡ, ಟೆಸ್ಟ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನವನ್ನು ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮುಂದುವರೆಸಬೇಕಿದೆ.

ಹಾಗೆ ಜ. 23 ರಿಂದ ನ್ಯೂಜಿಲೆಂಡ್‌ನಲ್ಲಿ ಶುರುವಾಗಲಿರುವ 5 ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಭಾರತ ಉತ್ತಮ ಪ್ರದರ್ಶನ ತೋರಿದ್ದೆ ಆದಲ್ಲಿ, ವಿಶ್ವಕಪ್ ಟೂರ್ನಿಗೂ ಇದು  ಪ್ರಯೋಜನವಾಗಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಭಾರತ ತಂಡ ಹೆಚ್ಚು ಪ್ರಯೋಗಾತ್ಮಕ ನಡೆಸುವ ಸಾಧ್ಯತೆ ಕಡಿಮೆ. ಹೀಗಾಗಿ ಭಾರತ ತಂಡ ವಿಶ್ವಕಪ್‌ಗೆ ಸಜ್ಜಾಗುವ  ದೃಷ್ಟಿಯಿಂದ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಹೆಚ್ಚು ಪ್ರಯೋಗಕ್ಕೆ ಒಡ್ಡಿಕೊಳ್ಳುವುದಿಲ್ಲ. ಅನುಭವಿ ಮತ್ತು ಯುವ ಆಟಗಾರರ ತಂಡವನ್ನು ಸಂಯೋಜನೆಗೊಳಿಸುವ ನಿಟ್ಟಿನಲ್ಲಿ ಭಾರತ ತಂಡ ಯೋಚಿಸುವ ಸಾಧ್ಯತೆಯಿದೆ