ಒಂದೊಮ್ಮೆ ಸಾನಿಯಾ ಈ ಬಾರಿಯೂ ಪ್ರಶಸ್ತಿ ಗೆದ್ದರೆ, ವೃತ್ತಿಬದುಕಿನಲ್ಲಿ ಏಳನೇ ಗ್ರಾಂಡ್‌ಸ್ಲಾಮ್ ಅನ್ನು ಜಯಿಸಿದಂತಾಗುತ್ತದೆ.
ಮೆಲ್ಬೋರ್ನ್(ಜ.27): ಮಹಿಳಾ ಡಬಲ್ಸ್ ವಿಭಾಗದಲ್ಲಿನ ವೈಫಲ್ಯದಿಂದ ಕೊಂಚ ಕಂಗೆಟ್ಟರೂ, ಮಿಶ್ರ ಡಬಲ್ಸ್'ನಲ್ಲಿನ ತನ್ನ ಜಯದ ಅಭಿಯಾನ ಮುಂದುವರೆಸಿರುವ ಭಾರತದ ನಂ.1 ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಋತುವಿನ ಮೊದಲ ಗ್ರಾಂಡ್'ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ನಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದಾರೆ.
ಕ್ರೊವೇಷಿಯಾದ ಜತೆಯಾಟಗಾರ ಐವಾನ್ ಡೊಡಿಗ್ ಜತೆಗೆ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಸ್ಥಳೀಯ ಜೋಡಿ ಸಮಂತಾ ಸ್ಟಾಸರ್ ಹಾಗೂ ಸ್ಯಾಮ್ ಗ್ರೋಥ್ ವಿರುದ್ಧ 6-4, 2-6, 10-5 ಸೆಟ್'ಗಳಲ್ಲಿ ಗೆಲುವು ಕಂಡ ಸಾನಿಯಾ ಜಯಭೇರಿ ಬಾರಿಸಿದರು.
ಶನಿವಾರ ನಡೆಯಲಿರುವ ಫೈನಲ್'ನಲ್ಲಿ ಅಮೆರಿಕದ ಅಬಿಗೇಲ್ ಸ್ಪಿಯರ್ಸ್ ಮತ್ತು ಜುವಾನ್ ಸೆಬಾಸ್ಟಿಯನ್ ಕೇಬಲ್ ವಿರುದ್ಧ ಸೆಣಸಲಿದ್ದಾರೆ.
ಸಾನಿಯಾ ಪಾಲಿಗಿದು ಐದನೇ ಆಸ್ಟ್ರೇಲಿಯಾ ಓಪನ್ ಫೈನಲ್ ಆಗಿದೆ. 2008ರಲ್ಲಿ ಮಹೇಶ್ ಭೂಪತಿ ಜತೆಗೆ ಪ್ರಶಸ್ತಿ ಜಯಿಸಿದ್ದ ಸಾನಿಯಾ, ಮರುವರ್ಷ ಮೆಲ್ಬೋರ್ನ್ ಪಾರ್ಕ್ನಲ್ಲಿ ಚಾಂಪಿಯನ್ ಆಗಿದ್ದರು. ಇನ್ನು, 2014ರಲ್ಲಿಯೂ ಹೊರಿಯಾ ಟೆಕೌ ಜತೆಗೆ ರನ್ನರ್ ಅಪ್ ಆಗಿದ್ದ ಸಾನಿಯಾ, ಕಳೆದ ವರ್ಷ ಮಾರ್ಟಿನಾ ಹಿಂಗಿಸ್ ಜತೆಗೆ ಮಹಿಳೆಯರ ಡಬಲ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದರು. ಒಂದೊಮ್ಮೆ ಸಾನಿಯಾ ಈ ಬಾರಿಯೂ ಪ್ರಶಸ್ತಿ ಗೆದ್ದರೆ, ವೃತ್ತಿಬದುಕಿನಲ್ಲಿ ಏಳನೇ ಗ್ರಾಂಡ್ಸ್ಲಾಮ್ ಅನ್ನು ಜಯಿಸಿದಂತಾಗುತ್ತದೆ.
