ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 48 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಸ್ನ್ಯಾಚ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ ಅವರು, ಒಟ್ಟು 190 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು. ಇದು ಕೂಟದಲ್ಲಿ ಚಾನು ಅವರ ನಾಲ್ಕನೇ ಪದಕವಾಗಿದೆ.
ಗ್ಲಾಸ್ಗೋ (ಜು.27): ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮೀರಾಬಾಯಿ ಚಾನು ಸತತ 3ನೇ ಬಾರಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಮಹಿಳೆಯರ 48 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್(ಭಾರ ಎತ್ತುವ ಸ್ಪರ್ಧೆ)ನಲ್ಲಿ 31 ವರ್ಷದ ಚಾನು ಒಟ್ಟು 190 ಕೆ.ಜಿ. ಭಾರ ಎತ್ತಿ ಚಾಂಪಿಯನ್ ಆದರು.
ಸ್ನ್ಯಾಚ್ ವಿಭಾಗದಲ್ಲಿ ಅವರು 85 ಕೆ.ಜಿ. ಭಾರ ಎತ್ತಿದರು. ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೊಸ ದಾಖಲೆ. ಬಳಿಕ ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ ಅವರು 105 ಕೆ.ಜಿ. ಭಾರವನ್ನು ಎತ್ತುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಒಟ್ಟು 190 ಕೆ.ಜಿ. ಭಾರದೊಂದಿಗೆ ಅವರು ಚಿನ್ನ ತಮ್ಮದಾಗಿಸಿಕೊಂಡರು. 2ನೇ ಸ್ಥಾನ ಪಡೆದ ನೈಜೀರಿಯಾದ ರುಥ್ ನ್ಯೊಂಗ್(168 ಕೆ.ಜಿ.) ಅವರಿಗಿಂತ ಚಾನು ಬರೋಬ್ಬರಿ 22 ಕೆ.ಜಿ. ಹೆಚ್ಚು ಭಾರ ಎತ್ತಿದರು ಎಂಬುದು ಗಮನಾರ್ಹ.
ಇದರೊಂದಿಗೆ ಕೂಟದಲ್ಲಿ ಭಾರತದ ಪದಕ ಗಳಿಕೆ 3ಕ್ಕೆ ಏರಿಕೆಯಾಗಿದೆ. ಶನಿವಾರ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಝಂಡು ಕುಮಾರ್ ಕಂಚು ಪಡೆದಿದ್ದರು.
4ನೇ ಪದಕ:
ಚಾನುಗೆ ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಿಕ್ಕ 4ನೇ ಪದಕ. 2014ರಲ್ಲಿ 48 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದ ಅವರು, 2018ರಲ್ಲಿ 48 ಕೆ.ಜಿ. ವಿಭಾಗದಲ್ಲಿ ಚಿನ್ನ ಹೆಕ್ಕಿದ್ದರು. 2022ರಲ್ಲಿ 49 ಕೆ.ಜಿ. ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದ್ದರು. ಇದರ ಹೊರತಾಗಿ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಬೆಳ್ಳಿ, 1 ಚಿನ್ನ ಗೆದ್ದಿದ್ದಾರೆ.
ಭಾರತದ ವೇಟ್‌ಲಿಫ್ಟಿಂಗ್‌ನಲ್ಲಿ ಹೊಸ ಅಧ್ಯಾಯ: ಮೋದಿ
ಇದು ಭಾರತದ ವೇಟ್‌ಲಿಫ್ಟಿಂಗ್‌ನಲ್ಲಿ ಹೊಸ ಅಧ್ಯಾಯ. ಪ್ರತಿಭಾವಂತೆ ಮೀರಾಬಾಯಿ ಚಾನು ಮತ್ತೊಮ್ಮೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 48 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಸತತ 3 ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ, ಒಟ್ಟಾರೆ 4 ಪದಕ ಗೆದ್ದು, ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ಅವರಿಗೆ ಅಭಿನಂದನೆಗಳು,
- ನರೇಂದ್ರ ಮೋದಿ, ಪ್ರಧಾನಿ


