ಪ್ಯಾರಿಸ್ ಒಲಿಂಪಿಕ್ಸ್ ನಂತರ ಗಾಯದಿಂದ ಬಳಲುತ್ತಿದ್ದ ಮೀರಾಬಾಯಿ ಚಾನು, ಕಾಮನ್ವೆಲ್ತ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 193 ಕೆಜಿ ಭಾರ ಎತ್ತುವ ಮೂಲಕ ಚಾನು ಹೊಸ ದಾಖಲೆ ನಿರ್ಮಿಸಿದರು.

ಅಹಮದಾಬಾದ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಗಾಯದಿಂದಾಗಿ ಸ್ಪರ್ಧೆಯಿಂದ ದೂರವುಳಿದಿದ್ದ ಭಾರತದ ತಾರಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು, ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ಕಮ್‌ಬ್ಯಾಕ್‌ ಕೂಟವನ್ನು ಅವಿಸ್ಮರಣೀಯಗೊಳಿಸಿದ್ದಾರೆ.

ಸೋಮವಾರ ಇಲ್ಲಿ ನಡೆದ ಮಹಿಳೆಯರ 48 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚಾನು ಒಟ್ಟು 193 ಕೆ.ಜಿ. ಭಾರ ಎತ್ತಿದರು. 31 ವರ್ಷದ ಚಾನು ಸ್ನ್ಯಾಚ್‌ನಲ್ಲಿ 84 ಕೆ.ಜಿ. ಭಾರ ಎತ್ತಿ ಹಿಂದಿನ ದಾಖಲೆ(80 ಕೆ.ಜಿ.) ಅಳಿಸಿ ಹಾಕಿದರು. ಬಳಿಕ 89 ಕೆ.ಜಿ. ಭಾರಕ್ಕೆ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 109 ಕೆ.ಜಿ. ಭಾರ ಎತ್ತಿದ್ದು ಕೂಡಾ ದಾಖಲೆ ಎನಿಸಿಕೊಂಡಿತು.

Scroll to load tweet…

Scroll to load tweet…

ಮಲೇಷ್ಯಾದ ಐರೆನ್‌ ಹೆನ್ರಿ 161 ಕೆ.ಜಿ.(73+88 ಕೆ.ಜಿ.) ಬೆಳ್ಳಿ, ವೇಲ್ಸ್‌ನ ನಿಕೋಲ್‌ ರಾಬರ್ಟ್ಸ್‌ 150 ಕೆ.ಜಿ.(70+80 ಕೆ.ಜಿ.) ಕಂಚು ಗೆದ್ದರು.

ಇದೇ ವೇಳೆ ರಾಷ್ಟ್ರೀಯ ಗೇಮ್ಸ್‌ ಚಾಂಪಿಯನ್‌ ರಿಶಿಕಂಠ ಸಿಂಗ್‌ ಪುರುಷರ 60 ಕೆ.ಜಿ. ವಿಭಾಗದಲ್ಲಿ ಒಟ್ಟು 271 ಕೆ.ಜಿ. ಭಾರ ಎತ್ತಿ ಚಿನ್ನ ಸಂಪಾದಿಸಿದರು. ಕಿರಿಯರ ವಿಭಾಗದಲ್ಲಿ ಸೌಮ್ಯ ಕೂಡಾ ಚಿನ್ನ ಜಯಿಸಿದರು.

ಡೈಮಂಡ್‌ ಲೀಗ್‌ ಫೈನಲ್‌: ನೀರಜ್‌ಗೆ ಕಠಿಣ ಸವಾಲು

ನವದೆಹಲಿ: ಭಾರತದ ತಾರಾ ಜಾವೆಲಿನ್ ಪಟು ನೀರಜ್ ಚೋಪ್ರಾ ಆ.27-28ಕ್ಕೆ ಸ್ವಿಜರ್‌ಲೆಂಡ್‌ನ ಜ್ಯುರಿಚ್‌ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅವರಿಗೆ ಗ್ರೆನಡಾದ ಆಂಡರ್‌ಸನ್‌ ಪೀಟರ್ಸ್‌ ಮತ್ತು ಜರ್ಮನಿಯ ಜೂಲಿಯನ್ ವೆಬರ್‌ರಂತಹ ಬಲಿಷ್ಠ ಆಟಗಾರರ ಸವಾಲು ಎದುರಾಗಲಿದೆ. ಅಲ್ಲದೆ ಆ್ಯಂಡ್ರಿಯನ್ ಮಾರ್ಡೇರ್‌, ಕೆಶೋರ್ನ್ ವಾಲ್ಕಾಟ್, ಜೂಲಿಯಸ್ ಯೆಗೊ ಕೂಡಾ ಕಣದಲ್ಲಿದ್ದಾರೆ. 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್‌ 2022ರಲ್ಲಿ ಡೈಮಂಡ್‌ ಲೀಗ್‌ ಗೆದ್ದಿದ್ದರು. ಆ ಬಳಿಕ 2023, 2024ರಲ್ಲಿ ರನ್ನರ್‌ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇತ್ತೀಚೆಗೆ ಬೆಂಗಳೂರಿನ ನೀರಜ್‌ ಚೋಪ್ರಾ ಕ್ಲ್ಯಾಸಿಕ್‌ನಲ್ಲಿ ಕೊನೆ ಬಾರಿ ಸ್ಪರ್ಧಿಸಿದ್ದರು.

ವಿಶ್ವ ಬ್ಯಾಡ್ಮಿಂಟನ್: ಮೊದಲ ಸುತ್ತಿನಲ್ಲೇ ಹೊರಬಿದ್ದ ಸೇನ್‌!

ಪ್ಯಾರಿಸ್‌: ಸೋಮವಾರದಿಂದ ಆರಂಭವಾದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಆಟಗಾರ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲೇ ತಮ್ಮ ಅಭಿಯಾನ ಅಂತ್ಯಗೊಳಿಸಿದರು. ಅಗ್ರ ಶ್ರೇಯಾಂಕಿತ ಚೀನಾದ ಶಿ ಯು ಕಿ ಅವರ ವಿರುದ್ಧ ಲಕ್ಷ್ಯ 17-21, 19-21 ಅಂಕಗಳ ಅಂತರದಲ್ಲಿ ಪರಾಭವಗೊಂಡು ನಿರಾಸೆ ಅನುಭವಿಸಿದರು. 2024ರ ಜನವರಿಯಿಂದ ಭಾಗವಹಿಸಿದ 9 ಫೈನಲ್‌ಗಳಲ್ಲಿಯೂ ಗೆದ್ದಿದ್ದ ಕಿ ವಿರುದ್ಧ ಸೇನ್‌ ಮಂಕಾದರು. ಆರಂಭದಲ್ಲಿ ಉತ್ತಮ ಆರಂಭವನ್ನೇ ಪಡೆದಿದ್ದ ಲಕ್ಷ್ಯ ಸೇನ್‌ ಸಮಬಲದ ಹೋರಾಟ ಪ್ರದರ್ಶಿಸಿದರು. ಆದರೆ ಆ ಬಳಿಕ ಹಿಡಿತ ಸಾಧಿಸಿದ ಶಿ ಯುಕಿ ಗೆದ್ದು ಬೀಗಿದರು.

ಏಷ್ಯನ್‌ ಶೂಟಿಂಗ್‌: ನೀರು ದಂಡಾ ಬಂಗಾರ ಸಾಧನೆ

ಶಿಮ್ಕೆಂಟ್‌(ಕಜಕಸ್ತಾನ): ಇಲ್ಲಿ ನಡೆಯುತ್ತಿರುವ 16ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶೂಟರ್‌ ನೀರು ದಂಡಾ ಅವರು ಮಹಿಳೆಯರ ಟ್ರ್ಯಾಪ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಸೋಮವಾರ ನಡೆದ ಫೈನಲ್‌ನಲ್ಲಿ ದಂಡಾ 43 ಶಾಟ್‌ಗಳೊಂದಿಗೆ ಅಗ್ರಸ್ಥಾನ ಪಡೆದರೆ, ಖತಾರ್‌ನ ಬಸಿಲ್‌ ರೇ(37) ಬೆಳ್ಳಿ, ಭಾರತದ ಆಶಿಮಾ(29) ಕಂಚು ಜಯಿಸಿದರು. ನೀರು ದಂಡಾ, ಆಶಿಮಾ, ಪ್ರೀತಿ ಅವರಿಗೆ ತಂಡ ವಿಭಾಗದಲ್ಲಿ ಚಿನ್ನ ಲಭಿಸಿತು. ಇನ್ನು, ಪುರುಷರ ಟ್ರ್ಯಾಪ್‌ ಫೈನಲ್‌ನಲ್ಲಿ ಭೌನೀಶ್‌ 45 ಶಾಟ್‌ಗಳೊಂದಿಗೆ ಬೆಳ್ಳಿ ಪಡೆದರು. ಆದರೆ ಒಲಿಂಪಿಕ್ ಪದಕ ವಿಜೇತ ಮನು ಭಾಕರ್‌ ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಜೂನಿಯರ್ಸ್‌ ಮಿಂಚು

ಇದೇ ವೇಳೆ ಕಿರಿಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಭಾರತ ಕ್ಲೀನ್‌ಸ್ವೀಪ್‌ ಸಾಧಿಸಿತು. ಪಾಯಲ್‌ ಚಿನ್ನ, ನಮ್ಯ ಕಪೂರ್‌ ಬೆಳ್ಳಿ, ತೇಜಸ್ವಿನಿ ಕಂಚು ಗೆದ್ದರು. ತಂಡ ವಿಭಾಗದಲ್ಲಿ ಅವರಿಗೆ ಬೆಳ್ಳಿ ಲಭಿಸಿತು.