ನವದೆಹಲಿ[ಮೇ.24]: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ರಾಜಕೀಯ ಇನ್ನಿಂಗ್ಸ್ ಅನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ಪೂರ್ವ ದೆಹಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೌತಮ್ ಗಂಭೀರ್ ಕಾಂಗ್ರೆಸ್’ನ ಅರ್ವಿಂದರ್ ಸಿಂಗ್ ವಿರುದ್ಧ 3,91,222 ಮತಗಳ ಅಂತರದ ಭಾರೀ ಅಂತರದ ಗೆಲುವು ದಾಖಲಿಸಿದ್ದಾರೆ. ಈ ಗೆಲುವಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಶುಭ ಕೋರಿದ್ದಾರೆ.

ಗಂಭೀರ್ ಸಿಕ್ಸರ್, ವಿಜೇಂದರ್ ಪಂಚರ್ - ಚುನಾವಣೆಯಲ್ಲಿ ಕ್ರೀಡಾಪಟುಗಳಿಗೆ ಸಿಹಿ-ಕಹಿ

ಗೆಲುವಿನ ಬಳಿಕ ಟ್ವೀಟ್ ಮಾಡಿದ್ದ ಗಂಭೀರ್, ಇದು ಆಕರ್ಷಕ ಕವರ್ ಡ್ರೈವ್ ಆಗಲಿ, ಅದ್ಭುತ ಬ್ಯಾಟಿಂಗ್ ಆಗಲಿ ಅಲ್ಲ. ಇದು ಬಿಜೆಪಿಯ ’ಗಂಭೀರ’ ತತ್ವಸಿದ್ದಾಂತದ ಗೆಲುವು. ಈ ಭಾರೀ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು. ಜನರ ನಿರೀಕ್ಷೆಗಳನ್ನು ನಾವು ಹುಸಿಮಾಡುವುದಿಲ್ಲ ಎಂದು ಗಂಭೀರ್ ಟ್ವೀಟ್ ಮಾಡಿದ್ದರು. 

ಪೂರ್ವ ದೆಹಲಿಯಲ್ಲಿ ಗೌತಮ್ ಗಂಭೀರ್[ಬಿಜೆಪಿ], ಕಾಂಗ್ರೆಸ್’ನ ಅರ್ವಿಂದರ್ ಸಿಂಗ್ ಹಾಗೂ ಆಮ್ ಆದ್ಮಿ ಪಕ್ಷದ ಆತಿಶಿ ಮರ್ಲೇನಾ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಗಂಭೀರ್ 6,96,156 ಮತಗಳನ್ನು ಪಡೆದರೆ, ಅರ್ವಿಂದರ್ ಸಿಂಗ್ 3,04,934 ಮತಗಳನ್ನು ಪಡೆದಿದ್ದರು. ಇನ್ನು ಆತಿಶಿ ಕೇವಲ 2,19,328 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿ ಉಳಿದರು.

ಕೆಲ ತಿಂಗಳುಗಳ ಹಿಂದಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದ ಗಂಭೀರ್, ಚೊಚ್ಚಲ ಲೋಕಸಭಾ ಚುನಾವಣೆಯಲ್ಲೇ ಭರ್ಜರಿಯಾಗಿ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಭೀರ್ ಗೆಲುವಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಮನದುಂಬಿ ಹಾರೈಸಿದ್ದಾರೆ.  ಹರ್ಭಜನ್ ಸಿಂಗ್, ಆರ್.ಪಿ ಸಿಂಗ್, ಶಿಖರ್ ಧವನ್, ಸುರೇಶ್ ರೈನಾ ಸೇರಿದಂತೆ ಹಲವು ಸಹಪಾಠಿ ಕ್ರಿಕೆಟಿಗರು ಗಂಭೀರ್’ಗೆ ಶುಭ ಹಾರೈಸಿದ್ದಾರೆ.