Asianet Suvarna News Asianet Suvarna News

Commonwealth Games 2022 ಸಾಧಕರಿಗೆ ಅದ್ಧೂರಿ ಸ್ವಾಗತ

* ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟಕ್ಕೆ ಅಧಿಕೃತ
* ಕಾಮನ್‌ವೆಲ್ತ್‌ ಸಾಧಕರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ
* ಈ ಬಾರಿ ಭಾರತ 22 ಚಿನ್ನ ಒಳಗೊಂಡ 61 ಪದಕಗಳನ್ನು ಜಯಿಸಿದೆ

Birmingham Commonwealth Games 2022 Indian Athletes receives gran welcome kvn
Author
Bengaluru, First Published Aug 10, 2022, 10:09 AM IST

ನವದೆಹಲಿ(ಆ.10): ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿ ಪದಕ ಬೇಟೆಯಾಡಿದ ಭಾರತೀಯ ಕ್ರೀಡಾಪಟುಗಳು ತವರಿಗೆ ವಾಪಸಾಗಿದ್ದಾರೆ. ಪದಕ ವಿಜೇತ ಕ್ರೀಡಾಪಟುಗಳಿಗೆ ವಿಮಾನ ನಿಲ್ದಾಣಗಳಲ್ಲಿ, ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌) ಕೇಂದ್ರಗಳಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಕೆಲ ಕಡೆಗಳಲ್ಲಿ ಸನ್ಮಾನ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.

ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಯ್‌ ಅಧಿಕಾರಿಗಳು ಕುಸ್ತಿಪಟುಗಳಾದ ಭಜರಂಗ್‌ ಪೂನಿಯಾ, ದೀಪಕ್‌ ಪೂನಿಯಾ, ರವಿ ದಹಿಯಾ, ಸಾಕ್ಷಿ ಮಲಿಕ್‌ರನ್ನು ಸ್ವಾಗತಿಸಿದರು. ಭಜರಂಗ್‌ಗೆ ಅಭಿಮಾನಿಗಳು ನೋಟಿನ ಹಾರ ಹಾಕಿ, ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವೆನಿಸಿತು. ಇನ್ನು ಜುಡೋನಲ್ಲಿ ಪದಕ ಗೆದ್ದ ತುಲಿಕಾ ಮಾನ್‌, ಬಾಕ್ಸಿಂಗ್‌ ಪದಕ ವಿಜೇತರಿಗೂ ಅದ್ಧೂರಿ ಸ್ವಾಗತ ಕೋರಲಾಯಿತು. ವೇಗದ ನಡಿಗೆಯಲ್ಲಿ ಬೆಳ್ಳಿ ಗೆದ್ದ ಪ್ರಿಯಾಂಕ ಗೋಸ್ವಾಮಿ ಅವರನ್ನು ಅವರ ತವರು ಉತ್ತರ ಪ್ರದೇಶದ ಮೇರಠ್‌ನಲ್ಲಿ ಸನ್ಮಾನಿಸಿ ಮೆರವಣಿಗೆ ಮಾಡಲಾಯಿತು.

ಕಾಮನ್ವೆಲ್ತ್‌ನಲ್ಲಿ ಭಾರತದಿಂದ ಸುಧಾರಿತ ಪ್ರದರ್ಶನ: ಅನುರಾಗ್ ಠಾಕೂರ್

ಶಿಮ್ಲಾ: ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಒಟ್ಟಾರೆಯಾಗಿ ದೇಶದ ಪ್ರದರ್ಶನ ಗುಣಮಟ್ಟ ಸುಧಾರಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

‘ವೇಟ್‌ಲಿಫ್ಟಿಂಗ್‌ನಿಂದ ಹಿಡಿದು ಅಥ್ಲೆಟಿಕ್ಸ್‌ವರೆಗೂ ಎಲ್ಲಾ ಕ್ರೀಡೆಗಳಲ್ಲೂ ನಮ್ಮ ಒಟ್ಟಾರೆ ಪ್ರದರ್ಶನ ಮಟ್ಟಸುಧಾರಿಸಿದೆ. 61 ಪದಕ ಗೆದ್ದಿದ್ದು ಖುಷಿ ನೀಡಿದೆ. ಓಟದ ಸ್ಪರ್ಧೆಗಳಲ್ಲಿ ಕೀನ್ಯಾ ಅಥ್ಲೀಟ್‌ಗಳಿಗೆ ಪೈಪೋಟಿ ನೀಡಿದ್ದು ಉತ್ತಮ ಬೆಳವಣಿಗೆ’ ಎಂದಿದ್ದಾರೆ.

ವಿದೇಶದಲ್ಲಿ ಭಾರತದ 4ನೇ ಶ್ರೇಷ್ಠ ಪ್ರದರ್ಶನ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ವಿದೇಶಿ ನೆಲದಲ್ಲಿ 4ನೇ ಶ್ರೇಷ್ಠ ಪ್ರದರ್ಶನ ತೋರಿದೆ. ಈ ಬಾರಿ ಭಾರತ 22 ಚಿನ್ನ ಒಳಗೊಂಡ 61 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು 2002ರಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ 30 ಚಿನ್ನ ಸೇರಿ 69 ಪದಕ ಗೆದ್ದಿದ್ದು ವಿದೇಶದಲ್ಲಿ ಭಾರತದ ಶ್ರೇಷ್ಠ ಪ್ರದರ್ಶನ ಎನಿಸಿದೆ. 

ಕಾಮನ್‌ವೆಲ್ತ್ ಗೇಮ್ಸ್ ಪದಕ ಗೆದ್ದ ದಿವ್ಯ ದೆಹಲಿ ಪರ ಆಡಿಲ್ಲ ಎಂದ ಆಪ್ ಶಾಸಕನಿಗೆ ದಾಖಲೆ ಸಹಿತ ಕಪಾಳಮೋಕ್ಷ!

2018ರಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು 26 ಚಿನ್ನದೊಂದಿಗೆ 66 ಪದಕ ಗೆದ್ದಿದ್ದರು. 2006ರ ಮೆಲ್ಬರ್ನ್‌ ಗೇಮ್ಸ್‌ನಲ್ಲಿ ಭಾರತೀಯರಿಗೆ 22 ಚಿನ್ನ ಸೇರಿ 50 ಪದಕ ಒಲಿದಿದ್ದರೆ, 2014ರ ಸ್ಕಾಟ್ಲೆಂಡ್‌ನ ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಭಾರತ 15 ಚಿನ್ನ ಸೇರಿ ಒಟ್ಟು 64 ಪದಕ ಗೆದ್ದಿತ್ತು.

ಶೂಟಿಂಗ್‌ ಇಲ್ಲದಿದ್ದರೂ ಪದಕ ಬೇಟೆಯಲ್ಲಿ ಹಿಂದೆ ಬೀಳದ ಭಾರತ

ಈ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಶೂಟಿಂಗ್‌ ಇಲ್ಲದ ಕಾರಣ ಭಾರತ ಪದಕ ಗಳಿಕೆಯಲ್ಲಿ ಹಿಂದೆ ಬೀಳಬಹುದು ಎಂದೇ ಹೇಳಲಾಗುತ್ತಿತ್ತು. ಆದರೆ ಇತರೆ ಕ್ರೀಡೆಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಭಾರತ ನಿರೀಕ್ಷಿತ ಸಂಖ್ಯೆಯಲ್ಲಿ ಪದಕ ಗೆಲ್ಲಲು ಯಶಸ್ವಿಯಾಗಿದೆ. ಕಾಮನ್‌ವೆಲ್ತ್‌ ಇತಿಹಾಸದಲ್ಲೇ ಭಾರತ ಅತೀ ಹೆಚ್ಚು ಪದಕ ಗೆದ್ದಿದ್ದು ಶೂಟಿಂಗ್‌ನಲ್ಲಿ. ಇದರಲ್ಲಿ ಭಾರತಕ್ಕೆ ಈವರೆಗೆ 63 ಚಿನ್ನ, 44 ಬೆಳ್ಳಿ, 28 ಕಂಚು ಸೇರಿ 135 ಪದಕ ಒಲಿದಿತ್ತು. 2018ರ ಗೋಲ್ಡ್‌ಕೋಸ್ಟ್‌ ಕ್ರೀಡಾಕೂಟದಲ್ಲಿ 7 ಚಿನ್ನ ಸೇರಿ 16 ಪದಕಗಳನ್ನು ಭಾರತೀಯ ಶೂಟರ್‌ಗಳ ಕೊಳ್ಳೆ ಹೊಡೆದಿದ್ದರು. ಆದರೆ ಕ್ರೀಡಾ ಸೌಲಭ್ಯಗಳ ಕೊರತೆ ಹಿನ್ನೆಲೆಯಲ್ಲಿ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ನಿಂದ ಶೂಟಿಂಗ್‌ ಹೊರಗಿಡಲಾಗಿತ್ತು. ಇದರ ಹೊರತಾಗಿಯೂ ಭಾರತ ಕುಸ್ತಿ, ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಅಭೂತಪೂರ್ವ ಪ್ರದರ್ಶನ ತೋರಿ 60ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ.

Follow Us:
Download App:
  • android
  • ios