ಮೈಸೂರು(ಆ.29): ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) 8ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್‌ ಬಳ್ಳಾರಿ ಟಸ್ಕರ್ಸ್‌ ಫೈನಲ್‌ಗೆ ಪ್ರವೇಶಿಸಿದೆ. ನಾಯಕ ಸಿ.ಎಂ. ಗೌತಮ್‌ ಭರ್ಜರಿ ಬ್ಯಾಟಿಂಗ್‌ ಹಾಗೂ ಕೆ.ಪಿ. ಅಪ್ಪಣ್ಣ ಸ್ಪಿನ್‌ ಮೋಡಿಗೆ ಕುಸಿದ ಬೆಳಗಾವಿ ಪ್ಯಾಂಥರ್ಸ್‌, ಬಳ್ಳಾರಿ ಟಸ್ಕರ್ಸ್‌ ವಿರುದ್ಧ 37 ರನ್‌ಗಳ ಅಂತರದಲ್ಲಿ ಸೋಲುಂಡಿತು. ಈ ಸೋಲಿನ ಹೊರ​ತಾ​ಗಿಯೂ ಬೆಳ​ಗಾವಿ ಫೈನಲ್‌ಗೇರುವ ಅವಕಾಶವಿದೆ.

KPL 2019: ಲೀಗ್ ಹೋರಾಟ ಅಂತ್ಯ, ಪ್ಲೇ ಆಫ್‌ಗೆ 4 ತಂಡ ಲಗ್ಗೆ!

ಬುಧವಾರ ಗಂಗೋತ್ರಿ ಗ್ಲೈಡ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಳ್ಳಾರಿ ನೀಡಿದ ಬೃಹತ್‌ ಸವಾಲನ್ನು ಬೆನ್ನತ್ತಿದ ಬೆಳಗಾವಿ 12 ರನ್‌ಗಳಿಸುವಷ್ಟರಲ್ಲಿ ನಾಯಕ ಕೌನೇನ್‌ ಅಬ್ಬಾಸ್‌ (4) ರನ್ನು ಕಳೆದುಕೊಂಡಿತು. ಆರ್‌. ಸಮರ್ಥ್ (2) ಬೇಗನೆ ನಿರ್ಗಮಿಸಿದರು. ಈ ವೇಳೆ ಸ್ಟಾಲಿನ್‌ ಹೂವರ್‌ ವೇಗದ ಆಟಕ್ಕೆ ಮುಂದಾದರು. 32 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್‌ ಸಹಿತ 39 ರನ್‌ಗಳಿಸಿ ಅಪಾಯಕಾರಿಯಾಗುತ್ತಿದ್ದ ಸ್ಟಾಲಿನ್‌ರನ್ನು ಪಡಿಕ್ಕಲ್‌ ಪೆವಿಲಿಯನ್‌ ದಾರಿ ತೋರಿಸಿದರು. ಶುಭಾಂಗ್‌ ಹೆಗ್ಡೆ (3) ಸ್ಟಾಲಿನ್‌ ಬೆನ್ನಿಗೆ ಹಿಂತಿರುಗಿದರು. ರಿತೇಶ್‌ ಭಟ್ಕಳ್‌ (8), ರಕ್ಷಿತ್‌ (9) ಹೆಚ್ಚು ಹೊತ್ತು ನಿಲ್ಲಲು ಅಪ್ಪಣ್ಣ ಹಾಗೂ ಕಾರ್ತಿಕ್‌ ಅವಕಾಶ ನೀಡಲಿಲ್ಲ. ಬೆಳ​ಗಾವಿ ತಂಡ ಓವ​ರಲ್ಲಿ ರನ್‌ ಗಳಿ​ಸಿತು.

ಗೌತಮ್‌ ಸ್ಫೋಟ​ಕ ಅರ್ಧಶತಕ

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ ಬಳ್ಳಾರಿ ಟಸ್ಕರ್ಸ್‌ 35 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಈ ವೇಳೆ 3ನೇ ವಿಕೆಟ್‌ಗೆ ನಾಯಕ ಸಿ.ಎಂ. ಗೌತಮ್‌ ಜೊತೆಯಾದ ದೇವದತ್‌ ಪಡಿಕ್ಕಲ್‌ (19) 49 ರನ್‌ಗಳ ಜೊತೆಯಾಟ ನಿರ್ವಹಿಸಿ ತಂಡಕ್ಕೆ ಚೇತರಿಕೆ ನೀಡಿದರು. ಬಳಿಕ ಕಾರ್ತಿಕ್‌ ಹಾಗೂ ಜೀಶನ್‌ ಅಲಿ ಸಯ್ಯದ್‌ ಜೊತೆ ಗೌತಮ್‌ ಅದ್ಭುತ ಇನ್ನಿಂಗ್ಸ್‌ ಕಟ್ಟಿದರು.

4ನೇ ವಿಕೆಟ್‌ಗೆ ಕಾರ್ತಿಕ್‌ (25) ಜೊತೆ 67 ಹಾಗೂ 5ನೇ ವಿಕೆಟ್‌ಗೆ ಜೀಶನ್‌ (32) ಜೊತೆ 49 ರನ್‌ ಜೊತೆಯಾಟ ನಿರ್ವಹಿಸಿದ್ದರಿಂದ ಬಳ್ಳಾರಿ 200 ರನ್‌ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಭರ್ಜರಿ ಬ್ಯಾಟಿಂಗ್‌ ನಡೆಸಿದ ಗೌತಮ್‌ 63 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ ಸಹಿತ 96 ರನ್‌ಗಳಿಸಿದರು. ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. ಬೆಳಗಾವಿ ಪರ ಫಾರೂಕಿ, ಅವಿನಾಶ್‌ ತಲಾ 2 ವಿಕೆಟ್‌ ಕಬಳಿಸಿದರು.

ಸ್ಕೋರ್‌:

ಬಳ್ಳಾರಿ ಟಸ್ಕರ್ಸ್‌: 201/7, 
ಬೆಳಗಾವಿ ಪ್ಯಾಂಥರ್ಸ್‌:64/7

ಇಂದು ಎಲಿ​ಮಿ​ನೇ​ಟರ್‌ ಪಂದ್ಯ

ಪ್ಲೇ-ಆಫ್‌ ಹಂತದ ಎಲಿ​ಮಿ​ನೇ​ಟರ್‌ ಪಂದ್ಯ ಗುರು​ವಾರ ನಡೆ​ಯ​ಲಿದ್ದು, ಹುಬ್ಬಳ್ಳಿ ಟೈಗ​ರ್ಸ್ ಹಾಗೂ ಶಿವ​ಮೊ​ಗ್ಗ ಲಯನ್ಸ್‌ ತಂಡಗಳು ಮುಖಾ​ಮುಖಿ​ಯಾ​ಗ​ಲಿವೆ. 
ಈ ಪಂದ್ಯ​ದಲ್ಲಿ ಸೋಲುವ ತಂಡ ಟೂರ್ನಿ​ಯಿಂದ ಹೊರ​ಬೀ​ಳ​ಲಿದೆ. ಗೆಲ್ಲುವ ತಂಡ, 2ನೇ ಕ್ವಾಲಿ​ಫೈ​ಯ​ರ್‌ನಲ್ಲಿ ಬೆಳ​ಗಾವಿ ವಿರುದ್ಧ ಸೆಣ​ಸ​ಲಿ​ದ್ದು, ಫೈನಲ್‌ನಲ್ಲಿ ಸ್ಥಾನ​ಕ್ಕಾಗಿ ಪೈಪೋ​ಟಿ ನಡೆ​ಸ​ಲಿದೆ.