ಈ ಗೆಲುವಿನೊಂದಿಗೆ ಭಾರತವು ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಅಕ್ಟೋಬರ್ 26ರಂದು ರಾಂಚಿಯಲ್ಲಿ ನಾಲ್ಕನೇ ಪಂದ್ಯ ನಡೆಯಲಿದೆ.​

ಚಂಡೀಗಡ(ಅ. 23): ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿಯವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಜಯಶಾಲಿಯಾಗಿದೆ. ಇಂದು ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಕಿವೀಸ್ ಪಡೆಯನ್ನು ಭಾರತ 7 ವಿಕೆಟ್'ಗಳಿಂದ ಬಗ್ಗುಬಡಿಯಿತು. ಗೆಲ್ಲಲು ಪಡೆದ 286 ರನ್ ಗುರಿಯನ್ನು ಭಾರತ ಇನ್ನೂ 10 ಎಸೆತ ಬಾಕಿ ಇರುವಂತೆಯೇ ಹಿಮ್ಮೆಟ್ಟಿಸಿತು.

ಕೊಹ್ಲಿ ಅಜೇಯ 154 ರನ್ ಗಳಿಸಿ ಮತ್ತೊಮ್ಮೆ ತಾವು ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಿದರು. ಇದಕ್ಕೆ ಮುನ್ನ ಕೊಹ್ಲಿ ಜೊತೆ ಧೋನಿ ಆಡಿದ ಜೊತೆಯಾಟವೂ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಮೊದಮೊದಲು ಸಾಧಾರಣ ಆಟದ ಪ್ರದರ್ಶನ ನೀಡಿತು. ಒಂದು ಹಂತದಲ್ಲಿ 199 ರನ್ನಿಗೆ 8 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಅಲ್ಪಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ, ಜೇಮ್ಸ್ ನೀಶಮ್ ಮತ್ತು ಮ್ಯಾಟ್ ಹೆನ್ರಿ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರಿಬ್ಬರು 9ನೇ ವಿಕೆಟ್'ಗೆ 11.1 ಓವರ್'ನಲ್ಲಿ 84 ರನ್ ಪೇರಿಸಿದರು. ಇದರೊಂದಿಗೆ ನ್ಯೂಜಿಲೆಂಡ್ 185 ರನ್'ಗಳ ಪ್ರಬಲ ಮೊತ್ತ ಪೇರಿಸಲು ಸಾಧ್ಯವಾಯಿತು. ನ್ಯೂಜಿಲೆಂಡ್ ಇನ್ನಿಂಗ್ಸಲ್ಲಿ ಟಾಮ್ ಲಾಥಮ್, ರಾಸ್ ಟೇಲರ್, ನೀಶಮ್ ಮತ್ತು ಹೆನ್ರಿ ಆಟ ಹೈಲೈಟ್ ಆಯಿತು.

ಇನ್ನು, ಗೆಲ್ಲಲು ಪ್ರಬಲ ಸವಾಲು ಪಡೆದ ಭಾರತದ ಬ್ಯಾಟಿಂಗ್ ಆರಂಭದಲ್ಲೇ ಕುಸಿಯಿತು. ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಬೇಗನೇ ನಿರ್ಗಮಿಸಿದರು. ಈ ಹಂತದಲ್ಲಿ ಧೋನಿ 4ನೇ ಕ್ರಮಾಂಕಕ್ಕೆ ಸ್ವಯಂಬಡ್ತಿ ಪಡೆದು ವಿರಾಟ್ ಕೊಹ್ಲಿಯ ಜೊತೆಗೂಡಿದರು. ಇವರ ಲೆಕ್ಕಾಚಾರ ವರ್ಕೌಟ್ ಆಯಿತು. ಇವರಿಬ್ಬರು 3ನೇ ವಿಕೆಟ್'ಗೆ 151 ರನ್ ಜೊತೆಯಾಟ ಆಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಲ್ಲದೇ ಗೆಲುವಿನ ದಾರಿಯನ್ನು ಸುಗಮಗೊಳಿಸಿರು. ಧೋನಿ ಇದೇ ವೇಳೆ 9 ಸಾವಿರ ರನ್ ಮೈಲಿಗಲ್ಲು ಮುಟ್ಟಿದರು. ಧೋನಿ ನಿರ್ಗಮನದ ಬಳಿಕ ಬಂದ ಮನೀಶ್ ಪಾಂಡೆಯವರು ಕೊಹ್ಲಿಗೆ ಸರಿಯಾದ ಸಾಥ್ ನೀಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಲು ನೆರವಾದರು. 6 ರನ್ನಿದ್ದಾಗ ಕ್ಯಾಚ್ ಔಟ್'ನಿಂದ ಬಚಾವಾಗಿದ್ದ ಕೊಹ್ಲಿ ತಮ್ಮ 26ನೇ ಏಕದಿನ ಶತಕ ಭಾರಿಸಿ ತಂಡದ ಗೆಲುವಿನ ರೂವಾರಿಯಾದರು.

ಈ ಗೆಲುವಿನೊಂದಿಗೆ ಭಾರತವು ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಅಕ್ಟೋಬರ್ 26ರಂದು ರಾಂಚಿಯಲ್ಲಿ ನಾಲ್ಕನೇ ಪಂದ್ಯ ನಡೆಯಲಿದೆ.

ಸ್ಕೋರು ವಿವರ:

ನ್ಯೂಜಿಲೆಂಡ್ 49.4 ಓವರ್ 285 ರನ್ ಆಲೌಟ್
(ಟಾಮ್ ಲಾಥಮ್ 61, ಜೇಮ್ಸ್ ನೀಶಮ್ 57, ರಾಸ್ ಟೇಲರ್ 44, ಮ್ಯಾಟ್ ಹೆನ್ರಿ 39, ಮಾರ್ಟಿನ್ ಗುಪ್ಟಿಲ್ 27, ಕೇನ್ ವಿಲಿಯಮ್ಸನ್ 22 ರನ್ - ಕೇದಾರ್ ಜಾಧವ್ 29/3, ಉಮೇಶ್ ಯಾದವ್ 75/3, ಅಮಿತ್ ಮಿಶ್ರಾ 46/2)

ಭಾರತ 48.2 ಓವರ್ 289/3
(ವಿರಾಟ್ ಕೊಹ್ಲಿ ಅಜೇಯ 154, ಎಂಎಸ್ ಧೋನಿ 80, ಮನೀಶ್ ಪಾಂಡೆ ಅಜೇಯ 28 ರನ್ - ಮ್ಯಾಟ್ ಹೆನ್ರಿ 56/2)