ಮೈಸೂರು(ಆ.31):  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ಫೈನಲ್ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಮಣಿಸಿದ ವಿನಯ್ ಕುಮಾರ್ ನಾಯಕತ್ವದ ಹುಬ್ಳಿ ಟೈಗರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರೋಚಕ ಪಂದ್ಯದ ಅಂತಿಮ ಹಂತದ ವರೆಗೆ ಗೆಲುವು ಯಾರಿಗೆ ಅನ್ನೋದು ಕುತೂಹಲ ಮೂಡಿಸಿತ್ತು. ಆದರೆ ಬಳ್ಳಾರಿ ತಂಡದ ದೇವದತ್ ಪಡಿಕ್ಕಲ್ ವಿಕೆಟ್ ಪತನದೊಂದಿಗೆ ಹುಬ್ಳಿ ಟೈಗರ್ಸ್ ಬಿಗಿ ಹಿಡಿತ ಸಾಧಿಸಿತು. 8 ರನ್‌ಗಳಿಂದ ಬಳ್ಳಾರಿ ತಂಡವನ್ನು ಸೋಲಿಸಿದ ಹುಬ್ಳಿ ಟೈಗರ್ಸ್ ಟ್ರೋಫಿ ಕೈವಶ ಮಾಡಿತು.

ಮಹತ್ವದ ಫೈನಲ್ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ .  ಆದಿತ್ಯ ಸೋಮಣ್ಣ  47 ರನ್ ಹಾಗೂ ಲವ್ನೀತ್ ಸಿಸೋಡಿಯಾ 29 ರನ್ ಹೊರತುಪಡಿಸಿದರೆ ಇತರರು ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಆರಂಭಿಕ ಆಟಗಾರ ಮೊಹಮ್ಮದ್ ತಹಾ 9 ರನ್ ಸಿಡಿಸಿ ಔಟಾದರು.  ನಾಯಕ ವಿನಯ್ ಕುಮಾರ್ ಕೂಡ 4 ರನ್ ಗೆ ತೃಪ್ತಿಪಟ್ಟರು. 

ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ನಲ್ಲಿ ವಿನಯ್ ಕುಮಾರ್ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದ್ದು,ಟೈಗರ್ಸ್ ತಂಡದ ಬೃಹತ್ ಮೊತ್ತದ ಕನಸನ್ನು ದೂರಮಾಡಿತು. ಇಂಥ ಪರಿಸ್ಥಿತಿಯಲ್ಲಿ ತಂಡಕ್ಕೆ ಆಧಾರವಾಗಿ ನಿಂತವರು ಆದಿತ್ಯ ಸೋಮಣ್ಣ  38 ಎಸೆತಗಳನ್ನು ಎದುರಿಸಿದ 2 ಸಿಕ್ಸರ್ ನೆರವಿನಿಂದ ಅಮೂಲ್ಯ 47 ರನ್ ಗಳಿಸಿದರು.  ಲವ್ನಿತ್ ಸಿಸೋಡಿಯಾ 29 ಎಸೆತಗಳಲ್ಲಿ 2  ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 29 ರನ್ ಗಳಿಸಿದರು. ಈ ಮೂಲಕ 6 ವಿಕೆಟ್ ನಷ್ಟಕ್ಕೆ 152 ರನ್ ಸಿಡಿಸಿತು.

153 ರನ್ ಗುರಿ ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್ ಆರಂಭದಲ್ಲೇ ಕುಸಿತ ಕಂಡಿತು. ಅಭಿಷೇಕ್ ರೆಡ್ಡಿ 2,  ಕೃಷ್ಣಪ್ಪ ಗೌತಮ್ 1 ರನ್ ಸಿಡಿಸಿ ಔಟಾದರು. ಭವೇಶಾ ಗುಲೇಚಾ 15 ರನ್ ಸಿಡಿಸಿ ಔಟಾದರು. ಸಿಎಂ ಗೌತಮ್ ಹಾಗೂ ದೇವದತ್ ಪಡಿಕ್ಕಲ್ ಜೊತೆಯಾಟ ಬಳ್ಳಾರಿ ತಂಡಕ್ಕೆ ಹೊಸ ಹುರುಪು ಮೂಡಿಸಿತು. ಗೌತಮ್ 29 ರನ್ ಸಿಡಿಸಿ ಔಟಾದರು.

ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ಬಳ್ಳಾರಿ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು. ಆದರೆ ಪಡಿಕ್ಕಲ್‌ಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಕಾರ್ತಿಕ್ ಸಿಎ 3 ರನ್ ಸಿಡಿಸಿ ಔಟಾದರು. ಅಂತಿಮ 12 ಎಸೆತದಲ್ಲಿ ಬಳ್ಳಾರಿಗೆ ಗೆಲುವಿಗೆ 27 ರನ್ ಬೇಕಿತ್ತು. ಈ ವೇಳೆ 48 ಎಸೆತದಲ್ಲಿ 68 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದ ದೇವದತ್ ವಿಕೆಟ್ ಪತನಗೊಂಡಿತು.

ದೇವದತ್ ಪಡಿಕ್ಕಲ್ ವಿಕೆಟ್ ಪತನದೊಂದಿಗೆ ಬಳ್ಳಾರಿ ಗೆಲುವಿನ ಗೋಪುರ ಕುಸಿಯಿತು. ಬಳ್ಳಾರಿ 144  ರನ್‌ಗೆ ಆಲೌಟ್ ಆಯಿತು. ಈ ಮೂಲಕ ಹುಬ್ಳಿ ಟೈಗರ್ಸ್ 8 ರನ್ ಗೆಲುವು ಸಾಧಿಸಿ, ಟ್ರೋಫಿ ಗೆದ್ದುಕೊಂಡಿತು.