ಪುಣೆ(ಜ.10): ಇಲ್ಲಿನ ಶಿವ್‌ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ 2ನೇ ಆವೃತ್ತಿ ಖೇಲೋ ಇಂಡಿಯಾ ಯೂತ್ ಗೇಮ್ಸ್’ಗೆ ಅದ್ಧೂರಿ ಚಾಲನೆ ನೀಡಲಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಕಾರ್ಯಕ್ರಮದಲ್ಲಿ ಕ್ರೀಡಾ ದೀಪವನ್ನು ಪಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. 

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಸಂದೇಶದ ಮೂಲಕ ಪಾಲ್ಗೊಂಡಿರುವ ಎಲ್ಲ ಅಥ್ಲೀಟ್’ಗಳಿಗೆ ಶುಭ ಹಾರೈಸಿದರು. ಗುರುವಾರದಿಂದ ಅಥ್ಲೆಟಿಕ್ಸ್ ಕೂಟಗಳು ಶುರುವಾಗಲಿವೆ. ಕೂಟದಲ್ಲಿ ಅಂಡರ್-17 ಮತ್ತು 21 ಸೇರಿ 6000 ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕ್ರೀಡಾಕೂಟದ ‘ಪಾಂಚ್ ಮಿನಟ್ ಔರ್’ (ಮತ್ತೈದು ನಿಮಿಷ) ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಕೂಟದ ಮೊದಲ ದಿನ ಬುಧವಾರ ನಡೆದ ಅಂಡರ್ -17, ಮಹಿಳಾ 40 ಕೆ.ಜಿ ವಿಭಾಗದಲ್ಲಿ ನಡೆದ ವೇಟ್’ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಸೌಮ್ಯ ದಳವಿ ಚಿನ್ನ ಗೆದ್ದರೆ, ಆರತಿ ತಟಗಂಟಿ ಬೆಳ್ಳಿ ಪದಕ ಜಯಿಸಿದರು. ಅಂಡರ್-17 ವೇಟ್‌ಲಿಫ್ಟಿಂಗ್‌ನ ಪುರುಷರ 49 ಕೆ.ಜಿ ವಿಭಾಗ ದಲ್ಲಿ ಒಡಿಶಾದ ಭಕ್ತರಾಮ್ ದೇಸ್ತಿ ಚಿನ್ನ, ತಮಿಳುನಾ ಡಿನ ಟಿ. ಮಾಧವನ್ ಬೆಳ್ಳಿ ಪದಕ ಜಯಿಸಿದರು.

ಶ್ರೀಹರಿಗೆ ಪದಕದ ವಿಶ್ವಾಸ: ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ರಾಜ್ಯದ 280 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಅಂಡರ್-17 ವಿಭಾಗದಲ್ಲಿ ಈಜುಪಟು ಶ್ರೀಹರಿ ನಟರಾಜ್ ಪದಕ ಗೆಲ್ಲುವ ಭರವಸೆಯ ಕ್ರೀಡಾಪಟುವಾಗಿದ್ದಾರೆ. ಶ್ರೀಹರಿ, 100 ಮೀ. ಮತ್ತು 200 ಮೀ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ನನಗೆ ಮಹತ್ವದ ಸ್ಪರ್ಧೆಯಾಗಿದೆ ಎಂದು ಶ್ರೀಹರಿ ಹೇಳಿದ್ದಾರೆ.