ಜಪಾನ್‌ ಓಪನ್‌: ಶ್ರೀಕಾಂತ್‌ ಔಟ್‌, ಸಿಂಧು 2ನೇ ಸುತ್ತಿಗೆ

ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಮಿಶ್ರಫಲ ಎದುರಾಗಿದೆ. ಸಿಂಧು ಎರಡನೇ ಸುತ್ತಿಗೆ ಲಗ್ಗೆಯಿಟ್ಟರೆ, ಶ್ರೀಕಾಂತ್ ಆಘಾತ ಅನುಭವಿಸಿ ತಮ್ಮ ಹೋರಾಟ ಅಂತ್ಯಗೊಳಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Japan Open 2019 PV Sindhu eases into 2nd round Srikanth Kidambi crashes out

ಟೋಕಿಯೋ(ಜು.25): ಇಲ್ಲಿ ನಡೆಯುತ್ತಿರುವ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತಕ್ಕೆ ಮಿಶ್ರಫಲ ದೊರಕಿದೆ. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.10 ಕಿದಂಬಿ ಶ್ರೀಕಾಂತ್‌, ಸಮೀರ್‌ ವರ್ಮಾ ಮೊದಲ ಸುತ್ತಲ್ಲೇ ಸೋತು ನಿರ್ಗಮಿಸಿದರೆ, ಎಚ್‌.ಎಸ್‌. ಪ್ರಣಯ್‌, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಶಟ್ಲರ್‌ ಕೆ. ಶ್ರೀಕಾಂತ್‌, ತಮ್ಮವರೇ ಆದ ಎಚ್‌.ಎಸ್‌. ಪ್ರಣಯ್‌ ವಿರುದ್ಧ 21-13, 11-21, 20-22 ಗೇಮ್‌ ಗಳಲ್ಲಿ ಸೋತು ಹೊರಬಿದ್ದರು. ಇದರೊಂದಿಗೆ ಶ್ರೀಕಾಂತ್‌ ವೈಫಲ್ಯ ಈ ಟೂರ್ನಿಯಲ್ಲೂ ಮುಂದುವರಿಯಿತು. ಕೇವಲ 59 ನಿಮಿಷಗಳ ಆಟದಲ್ಲಿ ಶ್ರೀಕಾಂತ್‌, ಪ್ರಣಯ್‌ ವಿರುದ್ಧ ಸೋಲುಂಡು ನಿರ್ಗಮಿಸಿದರು.

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಮೇಲೆ ಕಣ್ಣಿಟ್ಟ ಸಿಂಧು

ಪ್ರಣಯ್‌ ವಿರುದ್ಧ ಮುಖಾಮುಖಿಯಲ್ಲಿ ಶ್ರೀಕಾಂತ್‌ ಉತ್ತಮ ಅಂಕಿ ಅಂಶ ಹೊಂದಿದ್ದಾರೆ. ಅದರಂತೆ ಮೊದಲ ಗೇಮ್‌ನಲ್ಲಿ 8 ಅಂಕಗಳಿಂದ ಮುನ್ನಡೆದರು. ಆದರೆ 2ನೇ ಗೇಮ್‌ನಲ್ಲಿ ಪ್ರಣಯ್‌ 10 ಅಂಕಗಳ ಅಂತರದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಮೊದಲ 2 ಗೇಮ್‌ಗಳಲ್ಲಿ ಸಮಬಲದ ಹೋರಾಟ ಕಂಡು ಬಂತು. 3ನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಅಂತಿಮವಾಗಿ ಪ್ರಣಯ್‌ 2 ಅಂಕಗಳ ಅಂತರದಲ್ಲಿ ಶ್ರೀಕಾಂತ್‌ ರನ್ನು ಹಿಂದಿಕ್ಕಿ ಪಂದ್ಯ ಗೆದ್ದರು.

ಸಿಂಧುಗೆ ಜಯ: ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಭಾರತದ ಏಕೈಕ ಶಟ್ಲರ್‌ ಸಿಂಧು, ಚೀನಾದ ಯು ಹನ್‌ ವಿರುದ್ಧ 21-9, 21-17 ಗೇಮ್‌ ಗಳಲ್ಲಿ ಗೆಲುವು ಸಾಧಿಸಿ 2ನೇ ಸುತ್ತಿಗೇರಿದರು. ಮುಂದಿನ ಸುತ್ತಿನಲ್ಲಿ ಸಿಂಧು, ಜಪಾನ್‌ನ ಅಯಾ ಒಹೊರಿ ರನ್ನು ಎದುರಿಸಲಿದ್ದಾರೆ. ಈ ಋುತುವಿನಲ್ಲಿ ಮೊದಲ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿ ಸಿಂಧು ಇದ್ದಾರೆ. ಕಳೆದ ವಾರ ಮುಕ್ತಾಯವಾಗಿದ್ದ ಇಂಡೋನೇಷ್ಯಾ ಓಪನ್‌ನಲ್ಲಿ ಸಿಂಧು ಫೈನಲ್‌ನಲ್ಲಿ ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದರು.

ಮತ್ತೊಂದು ಪಂದ್ಯದಲ್ಲಿ ಸಮೀರ್‌ ವರ್ಮಾ, ಡೆನ್ಮಾರ್ಕ್ನ ಆ್ಯಂಡ್ರೆಸ್‌ ಆಂಟೊನ್ಸೆನ್‌ ವಿರುದ್ಧ 17-21, 12-21 ಗೇಮ್‌ ಗಳಲ್ಲಿ ಪರಾಭವ ಹೊಂದಿದರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌, ಚಿರಾಗ್‌ ಶೆಟ್ಟಿಜೋಡಿ, ಇಂಗ್ಲೆಂಡ್‌ನ ಮಾರ್ಕಸ್‌, ಕ್ರಿಸ್‌ ಜೋಡಿ ವಿರುದ್ಧ 21-16, 21-17 ಗೇಮ್‌ ಗಳಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ.

Latest Videos
Follow Us:
Download App:
  • android
  • ios