ನವದೆಹಲಿ(ಡಿ.15): ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರನ್ನು ಡಿ. 16ರಿಂದ ಚೆನ್ನೈನಲ್ಲಿ ಆರಂಭಗೊಳ್ಳಲಿರುವ ಭಾರತ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ.

ಮುಂಬೈ ಟೆಸ್ಟ್ ಪಂದ್ಯದ ಬಳಿಕ ಆ್ಯಂಡರ್ಸನ್ ಅವರು ಬಳಲಿರುವ ಹಿನ್ನೆಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲು ತಂಡದ ವ್ಯವಸ್ಥಾಪಕ ಮಂಡಳಿ ಉದ್ದೇಶಿಸಿದೆ. ಹಾಗಾಗಿ ಐದನೇ ಟೆಸ್ಟ್ ಪಂದ್ಯದಿಂದ ಅವರನ್ನು ಕೈಬಿಡಲಾಗಿದೆ ಎಂದು ಕ್ರಿಕ್ ಬಝ್ ವರದಿ ಮಾಡಿದೆ.

ಈ ಸರಣಿಯ ಆರಂಭಕ್ಕೂ ಮುನ್ನ ಬಲ ಭುಜದ ನೋವಿನಿಂದ ಬಳಲುತ್ತಿದ್ದ ಆ್ಯಂಡರ್ಸನ್, ರಾಜ್‌'ಕೋಟ್‌'ನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯಕ್ಕೂ ಅಲಭ್ಯರಾಗಿದ್ದರು.

ಇಂಗ್ಲೆಂಡ್ ಪರ ಗರಿಷ್ಟ ವಿಕೆಟ್ ಪಡೆದು ಸಾಧನೆ ಮಾಡಿರುವ ಜಿಮ್ಮಿ, ಈ ಬಾರಿಯ ಸರಣಿಯಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.