ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ, ಹಾಲಿ ಚಾಂಪಿಯನ್, ಆತಿಥೇಯ ರಾಷ್ಟ್ರ, ಅಹಮದಾಬಾದ್ ಮೈದಾನ, ಮತ್ತು ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟೂರ್ನಿಗಳ ಸೋಲಿನಂತಹ ಐದು ಪ್ರಮುಖ ಅಪಶಕುನಗಳನ್ನು ಮುರಿಯುವ ಅವಕಾಶವಿದೆ.

ಅಹಮದಾಬಾದ್ (ಮಾ.7): ಟಿ20 ವಿಶ್ವಕಪ್ ಸಂಭ್ರಮ ಈಗ ಅಂತಿಮ ಹಂತಕ್ಕೆ ತಲುಪಿದೆ. ಪ್ರಶಸ್ತಿಗಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ. ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ತಂಡವು ಯಾವಾಗಲೂ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಈ ಬಾರಿಯ ಫೈನಲ್ ಪಂದ್ಯದ ಫಲಿತಾಂಶವು ಕಳೆದ ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದ್ದ ಐದು ದೊಡ್ಡ ತಪ್ಪು ಕಲ್ಪನೆಗಳನ್ನು ಅಥವಾ 'ಅಪಶಕುನ'ಗಳನ್ನು (Misconceptions) ದೂರ ಮಾಡುವ ಸಾಧ್ಯತೆ ಇದೆ.

ಭಾರತ ತಂಡ ಈ ಪಂದ್ಯ ಗೆದ್ದರೆ ಅಳಿಯಲಿರುವ ಆ 5 ಅಸಲಿ ಅಪಶಕುನಗಳು ಇಲ್ಲಿವೆ

ಮೊದಲ ಅಪಶಕುನ: ಹಾಲಿ ಚಾಂಪಿಯನ್‌ ತಂಡಕ್ಕೆ ಎರಡನೇ ಬಾರಿ ಪ್ರಶಸ್ತಿ ಇಲ್ಲ!

ಇದು ಟಿ20 ವಿಶ್ವಕಪ್‌ನ ಹತ್ತನೇ ಆವೃತ್ತಿ. ಕಳೆದ ಒಂಬತ್ತು ಆವೃತ್ತಿಗಳಲ್ಲಿ ಯಾವುದೇ ಹಾಲಿ ಚಾಂಪಿಯನ್ (Defending Champion) ತಂಡವು ಸತತವಾಗಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಇತಿಹಾಸವಿಲ್ಲ. ಭಾರತವು 2024ರ ಟಿ20 ವಿಶ್ವಕಪ್ ಗೆದ್ದಿತ್ತು. ಈಗ 2026ರಲ್ಲಿ ಮತ್ತೆ ಗೆದ್ದರೆ, ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಎರಡನೇ ಅಪಶಕುನ: ಆತಿಥೇಯ ತಂಡಕ್ಕೆ ಗೆಲುವಿಲ್ಲ!

ಟಿ20 ವಿಶ್ವಕಪ್ ಇತಿಹಾಸದಲ್ಲಿ ಮತ್ತೊಂದು ವಿಚಿತ್ರ ಕಾಕತಾಳೀಯವೆಂದರೆ, ಟೂರ್ನಿಯನ್ನು ಆಯೋಜಿಸಿದ ಆತಿಥೇಯ ದೇಶವು ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ. 2026ರ ಟೂರ್ನಿಗೆ ಭಾರತವೇ ಆತಿಥೇಯ ರಾಷ್ಟ್ರವಾಗಿದ್ದು, ಈಗ ಫೈನಲ್ ತಲುಪಿದೆ. ನ್ಯೂಜಿಲೆಂಡ್ ಸೋಲಿಸಿದರೆ ಈ ಅಪಖ್ಯಾತಿ ದೂರಾಗಲಿದೆ.

ಮೂರನೇ ಅಪಶಕುನ: ಅಹಮದಾಬಾದ್‌ನಲ್ಲಿ ಐಸಿಸಿ ಟ್ರೋಫಿ ಭಾಗ್ಯವಿಲ್ಲ!

ಭಾರತವು ಅಹಮದಾಬಾದ್‌ನ ಮೈದಾನದಲ್ಲಿ ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬುದು ದೊಡ್ಡ ಕೊರಗು. ಕಳೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಇಲ್ಲಿಯೇ ಸೋತಿತ್ತು. ಈಗ ಎರಡನೇ ಬಾರಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಸಿಸಿ ಫೈನಲ್ ನಡೆಯುತ್ತಿದ್ದು, ಇಲ್ಲಿ ಜಯಭೇರಿ ಬಾರಿಸುವ ಮೂಲಕ ಆ ಕಹಿ ನೆನಪನ್ನು ಅಳಿಸಿ ಹಾಕುವ ಅವಕಾಶ ಭಾರತಕ್ಕಿದೆ.

ನಾಲ್ಕನೇ ಅಪಶಕುನ: ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಮೇಲುಗೈ!

ಇತಿಹಾಸವನ್ನು ಗಮನಿಸಿದರೆ, ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮೂರು ಬಾರಿ ಮುಖಾಮುಖಿಯಾಗಿವೆ. ಈ ಮೂರೂ ಬಾರಿ ನ್ಯೂಜಿಲೆಂಡ್ ತಂಡವೇ ಭಾರತವನ್ನು ಸೋಲಿಸಿದೆ. ಈ ಬಾರಿಯ ಫೈನಲ್‌ನಲ್ಲಿ ಗೆದ್ದರೆ ಕಿವಿ ಪಡೆಯ ಮೇಲಿರುವ ಆ ಪ್ರಾಬಲ್ಯವನ್ನು ಭಾರತ ಮುರಿಯಲಿದೆ.

ಐದನೇ ಅಪಶಕುನ: ಐಸಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ಸುಲಭದ ತುತ್ತಲ್ಲ!

ಐಸಿಸಿ ಟೂರ್ನಿಗಳ ಫೈನಲ್ ಹಂತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾದಾಗಲೆಲ್ಲ ನ್ಯೂಜಿಲೆಂಡ್ ಗೆದ್ದಿದೆ. 2000ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಈ ಶಾಪವನ್ನು ವಿಮೋಚನೆಗೊಳಿಸಲು ಭಾರತ ತಂಡಕ್ಕೆ ಇದು ಸುವರ್ಣಾವಕಾಶ.