ನವದೆಹಲಿ[ಫೆ.24]: ಭಾರತದ ಅಪೂರ್ವಿ ಚಾಂಡೆಲಾ ಶನಿವಾರದಿಂದ ಇಲ್ಲಿ ಆರಂಭಗೊಂಡ 2019ರ ಮೊದಲ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. 

26 ವರ್ಷದ ಅಪೂರ್ವಿ ಫೈನಲ್‌ನಲ್ಲಿ 252.9 ಅಂಕ ಕಲೆಹಾಕಿ ಮೊದಲ ಸ್ಥಾನ ಪಡೆದರು. 251.8 ಅಂಕ ಪಡೆದ ಚೀನಾದ ರುಝು ಝವೊ ಬೆಳ್ಳಿ ಗೆದ್ದರೆ, ಚೀನಾದವರೇ ಆದ ಹಾಂಗ್‌ ಕ್ಸು 230.4 ಅಂಕಗಳೊಂದಿಗೆ ಕಂಚು ಜಯಿಸಿದರು.

ಕಳೆದ ವರ್ಷ ಕೊರಿಯಾದ ಚಾಂಗ್‌ವೊನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಝವೊ 252.4 ಅಂಕ ಗಳಿಸಿ ವಿಶ್ವ ದಾಖಲೆ ಬರೆದಿದ್ದರು. 0.5 ಅಂಕಗಳ ಮುನ್ನಡೆಯೊಂದಿಗೆ ಅಪೂರ್ವಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲೇ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದ ಅಪೂರ್ವಿ, ಅರ್ಹತಾ ಸುತ್ತಿನಲ್ಲಿ 629.3 ಅಂಕಗಳೊಂದಿಗೆ 4ನೇ ಸ್ಥಾನ ಪಡೆದಿದ್ದರು. 8 ಶೂಟರ್‌ಗಳಿದ್ದ ಫೈನಲ್‌ನಲ್ಲಿ ಅಪೂರ್ವಿ ಆರಂಭದಿಂದಲೂ ಪ್ರಾಬಲ್ಯ ಮೆರೆದು ಅಗ್ರಸ್ಥಾನ ಕಾಯ್ದುಕೊಂಡರು.