IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

ಐಪಿಎಲ್ ಫೈನಲ್ ಪಂದ್ಯ 12ನೇ ಆವೃತ್ತಿಯ ಅತ್ಯಂತ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಕೊನೆಯ ಎಸೆತದವರೆಗೂ ಫಲಿತಾಂಶ ಕುತೂಹಲವಾಗಿತ್ತು. ರೋಚಕ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿತು. ಈ ಮೂಲಕ ಟ್ರೋಫಿ ಗೆದ್ದುಕೊಂಡಿತು.
 

IPL final 2019 mumbai indians beat CSK by 1 runs and lift the trophy

ಹೈದರಾಬಾದ್(ಮೇ.12): 12ನೇ ಆವೃತ್ತಿ ಐಪಿಎಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೊನೆಯ ಎಸೆತದಲ್ಲಿ ವಿಕೆಟ್ ಕಬಳಿಸೋ ಮೂಲಕ ಮುಂಬೈ 1 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 4ನೇ ಬಾರಿಗೆ ಮುಂಬೈ ಟ್ರೋಫಿ ಗೆದ್ದುಕೊಂಡಿತು. ಗರಿಷ್ಠ ಐಪಿಎಲ್ ಪ್ರಶಸ್ತಿ ಗೆದ್ದ ತಂಡ ಅನ್ನೋ ದಾಖಲೆ ಬರೆಯಿತು.  

ಇದನ್ನೂ ಓದಿ: ಇತಿಹಾಸ ಮರುಕಳಿಸಿದರೆ ಈ ಸಲ ಕಪ್ ಮುಂಬೈದೇ..!

ಗೆಲುವಿಗೆ 150 ರನ್ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಡೀಸೆಂಟ್ ಒಪನಿಂಗ್ ಸಿಕ್ಕಿತು. ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಮೊದಲ ವಿಕೆಟ್‌ಗೆ 33 ರನ್ ಜೊತೆಯಾಟ ನೀಡಿದರು.  ಡುಪ್ಲೆಸಿಸ್ 26 ರನ್ ಸಿಡಿಸಿ ಔಟಾದರು. ಆದರೆ ಶೇನ್ ವ್ಯಾಟ್ಸನ್ ಹೋರಾಟ ಮುಂದುವರಿಸಿದರು.

ಸುರೇಶ್ ರೈನಾ 8  ರನ್ ಸಿಡಿಸಿ ಔಟಾದರು. ಅಂಬಾಟಿ ರಾಯುಡು ಕೂಡ ಆಸರೆಯಾಗಲಿಲ್ಲ. 73 ರನ್‌ಗೆ 3 ವಿಕೆಟ್ ಕಳೆದುಕೊಂಡ CSK ಒತ್ತಡಕ್ಕೆ ಸಿಲುಕಿತು. ನಾಯಕ ಧೋನಿ ಕೇವಲ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಅಷ್ಟರಲ್ಲೇ ಚೆನ್ನೈ ಆತಂಕ ಹೆಚ್ಚಾಯಿತು.  ಉತ್ತಮ ಹೋರಾಟ ನೀಡಿದ ಶೇನ್ ವ್ಯಾಟ್ಸನ್ ಅರ್ಧಶತಕ ಸಿಡಿಸಿ ಆಸರೆಯಾದರು. 

ನೋ ಬಾಲ್ ಪಜೀತಿ- ಸಚಿನ್ ತೆಂಡುಲ್ಕರ್ ಕಾಲೆಳೆದ ಐಸಿಸಿ

ಡ್ವೇನ್ ಬ್ರಾವೋ ಹಾಗೂ ವ್ಯಾಟ್ಸನ್ ಚೆನ್ನೈ ತಂಡಕ್ಕೆ ಚೇತರಿಕೆ ನೀಡಿದರು. ಕ್ರುನಾಲ್ ಪಾಂಡ್ಯ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸೋ ಮೂಲಕ ಮುಂಬೈ ಮೇಲೆ ಒತ್ತಡ ಹೇರಿದರು. ಅಂತಿಮ 12 ಎಸೆತದಲ್ಲಿ ಚೆನ್ನೈ ಗೆಲುವಿಗೆ 18 ರನ್ ಬೇಕಿತ್ತು. ಬ್ರಾವೋ 15 ರನ್ ಸಿಡಿಸಿ ಔಟಾದರು. ಆದರೆ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ 4 ರನ್ ಬೈಸ್ ಮೂಲಕ ನೀಡಿದರು. ಅಷ್ಟರಲ್ಲೇ ಪಂದ್ಯ ರೋಚಕ ಘಟ್ಟ ತಲುಪಿತು. 

3 ಎಸೆತದಲ್ಲಿ ಚೆನ್ನೈಗೆ 5 ರನ್ ಅವಶ್ಯಕತೆ ಇತ್ತು. 2 ರನ್ ಕದಿಯಲು ಹೋದ ವ್ಯಾಟ್ಸನ್ ರನೌಟ್‌ಗೆ ಬಲಿಯಾದರು. ವ್ಯಾಟ್ಸನ್ 59 ಎಸೆತದಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 80 ರನ್ ಸಿಡಿಸಿದರು. ಅಂತಿಮ ಎಸೆತದಲ್ಲಿ 2 ರನ್ ಬೇಕಿತ್ತು. ಕ್ರೀಸ್‌ನಲ್ಲಿದ್ದ ಶಾರ್ದೂಲ್ ಠಾಕೂರ್ ಎಲ್‌ಬಿ ಬಲೆಗೆ ಬಿದ್ರು. ಈ ಮೂಲಕ ಮುಂಬೈ ಇಂಡಿಯನ್ಸ್ 1 ರನ್‌ಗಳ ರೋಚಕ ಗೆಲುವು ಸಾಧಿಸಿತು. 4ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇತಿಹಾಸ ಬರೆಯಿತು. 

Latest Videos
Follow Us:
Download App:
  • android
  • ios