ಬೆಂಗಳೂರು[ಮೇ.12]: ಭಾರತದ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿ ಫೈನಲ್ ಪಂದ್ಯದಲ್ಲಿ ತಲಾ ಮೂರು ಬಾರಿ ಚಾಂಪಿಯನ್ಸ್’ಗಳಾದ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

CSK Vs MI ಫೈನಲ್ ಫೈಟ್- ಯುವಿಗೆ ಸಿಗುತ್ತಾ ಚಾನ್ಸ್?

ಎರಡು ಬಲಿಷ್ಠ ತಂಡಗಳ ನಡುವಿನ ಫೈನಲ್ ಫೈಟ್’ಗೆ ಹೈದರಾಬಾದ್’ನ ರಾಜೀವ್ ಗಾಂಧಿ ಮೈದಾನ ಸಾಕ್ಷಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದಿರುವ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲಿ 2 ಹಾಗೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿ ಪಡೆಗೆ ಸೋಲುಣಿಸಿದೆ. ಕುತೂಹಲದ ಸಂಗತಿಯೆಂದರೆ ಇದುವರೆಗೂ ಚೆನ್ನೈ ಹಾಗೂ ಮುಂಬೈ ತಂಡಗಳು 27 ಬಾರಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ ತಂಡ 16 ಬಾರಿ ಜಯ ಸಾಧಿಸಿದ್ದರೆ, ಚೆನ್ನೈ ಸೂಪರ್’ಕಿಂಗ್ಸ್ ತಂಡವು ಕೇವಲ 11 ಬಾರಿ ಗೆಲುವಿನ ಸಿಹಿಯುಂಡಿದೆ. ಇನ್ನು ಈ 2 ತಂಡಗಳ ನಡುವೆ ನಡೆದ ಕಳೆದ 8 ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 7ರಲ್ಲಿ ಜಯ ಸಾಧಿಸಿದ್ದರೆ, ಚೆನ್ನೈ ಗೆದ್ದಿರೋದು ಕೇವಲ ಒಮ್ಮೆ ಮಾತ್ರ. 

ಒಂದೂ ಎಸೆತ ಹಾಕದೇ IPL ಫೈನಲ್ ಫಲಿತಾಂಶ ಗೆಸ್ ಮಾಡಬಹುದು..!

ಇವೆಲ್ಲವುಗಳಿಗಿಂತ ಇನ್ನೊಂದು ಕುತೂಹಲದ ಸಂಗತಿ ಮುಂಬೈ ಇಂಡಿಯನ್ಸ್ ಪಾಲಿಗೆ ವರದಾನ ಆಗುವ ಸಾಧ್ಯತೆಯಿದೆ. ಇತಿಹಾಸ ಮರುಕಳಿಸಿದ್ದೇ ಆದರೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಕಪ್ ಗೆಲ್ಲಲಿದೆ. ಹೌದು, 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು, ಆದರೆ 2014ರಲ್ಲಿ ರೋಹಿತ್ ಪಡೆ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಇದಾದ ಬಳಿಕ 2015ರಲ್ಲಿ ಚೆನ್ನೈ ತಂಡವನ್ನು ಫೈನಲ್’ನಲ್ಲಿ ಮಣಿಸಿದ ರೋಹಿತ್ ಪಡೆ ಎರಡನೇ ಬಾರಿಗೆ ಕಪ್ ಜಯಿಸಿತ್ತು. ಇನ್ನು 2016ರಲ್ಲಿ ಮುಂಬೈ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿತ್ತು, ಆದರೆ 2017ರಲ್ಲಿ ರೈಸಿಂಗ್ ಪುಣೆ ಸೂಪರ್’ಜೈಂಟ್ಸ್ ತಂಡವನ್ನು ಮಣಿಸಿ ಮುಂಬೈ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕಾಕತಾಳೀಯವೆಂದರೆ 2018ರಲ್ಲಿ ರೋಹಿತ್ ಪಡೆ ಮತ್ತೆ ಲೀಗ್ ಹಂತದಲ್ಲೇ ಹೊರಬಿದ್ದಿತ್ತು, ಆದರೆ 2019ರಲ್ಲೀಗ ಫೈನಲ್ ಪ್ರವೇಶಿಸಿದೆ. ಇತಿಹಾಸ ಮರುಕಳಿಸಿದರೆ ಈ ಸಲ ಕಪ್ ಮುಂಬೈದೇ ಅನ್ನೋದು ರೋಹಿತ್ ಅಭಿಮಾನಿಗಳ ವಿಶ್ವಾಸ.