ವಿಶಾಖಪಟ್ಟಣಂ(ಅ.06): ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಹೋರಾಟದಲ್ಲಿ ಭಾರತ 203 ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ  ಮಿಂಚಿನ ದಾಳಿಗೆ ಸೌತ್ ಆಫ್ರಿಕಾ ದೂಳೀಪಟವಾಗಿದೆ. ಭಾರತದ ಗೆಲುವಿನ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ವಿಶಾಖಪಟ್ಟಣಂ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ 215 ರನ್, ರೋಹಿತ್ ಶರ್ಮಾ 176 ರನ್ ಸಿಡಿಸೋ ಮೂಲಕ ಭಾರತ 7 ವಿಕೆಟ್ ನಷ್ಟಕ್ಕೆ 502 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. 

ಸೌತ್ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ  ಡೀನ್ ಎಲ್ಗರ್ 160 ರನ್, ಕ್ವಿಂಟನ್ ಡಿಕಾಕ್ 111 ರನ್, ನಾಯಕ ಫಾಫ್ ಡುಪ್ಲೆಸಿಸ್ 55 ರನ್ ಸಿಡಿಸಿದರು. ಆದರೆ ಆರ್ ಅಶ್ವಿನ್ 7 ವಿಕೆಟ್ ಕಬಳಿಸೋ ಮೂಲಕ ಸೌತ್ ಆಫ್ರಿಕಾ 431 ರನ್‌ಗೆ ಆಲೌಟ್ ಆಯಿತು.

2ನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಶತಕ, ಚೇತೇಶ್ವರ್ ಪೂಜಾರ 80 ಹಾಗೂ ರವೀಂದ್ರ ಜಡೇಜಾ 40 ರನ್ ಕಾಣಿಕೆಯಿಂದ 4 ವಿಕೆಟ್ ನಷ್ಟಕ್ಕೆ 323 ರನ್ ಸಿಡಿಸಿತು.

ಗೆಲುವಿಗೆ 395 ರನ್ ಟಾರ್ಗೆಟ್ ಪಡೆದ ಸೌತ್ ಆಫ್ರಿಕಾ ತಂಡ ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ದಾಳಿಗೆ ತತ್ತರಿಸಿತು. 191 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 203 ರನ್ ಗೆಲುವು ಸಾಧಿಸಿತು.