ಕೋಲ್ಕತಾ(ಏ.12): ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ಓಟ ಮುಂದುವರಿಸಿದರೆ, ಚೆನ್ನೈ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಡೆಲ್ಲಿ ವಿರುದ್ಧವೂ ಮುಗ್ಗರಿಸಿದೆ. ಆ್ಯಂಡ್ರೆ ರಸೆಲ್ ಅಬ್ಬರದ ಬ್ಯಾಟಿಂಗ್, ಶುಭ್‌ಮಾನ್ ಗಿಲ್ ಹೋರಾಟದ ಅರ್ಧಶತಕ ವ್ಯರ್ಥವಾಯ್ತು. ಶಿಖರ್ ಧವನ್ ಸಿಡಿಸಿದ ಅಜೇಯ 97 ರನ್ ನೆರವಿನಿಂದ ಡೆಲ್ಲಿ 7 ವಿಕೆಟ್ ಗೆಲುವು ಸಾಧಿಸಿತು.

ಗೆಲುವಿಗೆ 179 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್  ನಿರೀಕ್ಷಿತ ಆರಂಭ ಪಡೆಯಲಿಲ್ಲ. ಪೃಥ್ವಿ ಶಾ ಕೇಲಲ 14 ರನ್ ಸಿಡಿಸಿ ಔಟಾದರು. ಆರಂಭಿಕ ಯಶಸ್ಸು ಪಡೆದ ಕೆಕೆಆರ್, ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಕಬಳಿಸಿ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಕಳೆದ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಶಿಖರ್ ಧವನ್, ಕೆಕೆಆರ್ ತಂಡದ ಲೆಕ್ಕಾಚಾರ ಉಲ್ಟಾ ಮಾಡಿದರು.  ಇಷ್ಟೇ ಅಲ್ಲ ವಿಶ್ವಕಪ್ ಟೂರ್ನಿಗೂ ಮುನ್ನ ಧವನ್ ಫಾರ್ಮ್‌ಗೆ ಮರಳಿರೋದು ಟೀಂ ಇಂಡಿಯಾ ಅಭಿಮಾನಿಗಳ ಸಮಾಧಾನಕ್ಕೆ ಕಾರಣವಾಯಿತು.

ಧವನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದರೆ. ಇತ್ತ, ರಿಷಬ್ ಪಂತ್ ಉತ್ತಮ ಸಾಥ್ ನೀಡಿದರು. ಹಾಫ್ ಸೆಂಚುರಿ ಬಳಿಕವೂ ಧವನ್ ಅಬ್ಬರ ಮುಂದುವರಿಯಿತು. ಪಂತ್ 46 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಡೆಲ್ಲಿ ಗೆಲುವಿನ ಹಾದಿ ಸುಗುಮಗೊಂಡಿತ್ತು. ಇತ್ತ ಡೆಲ್ಲಿ ಗೆಲುವಿಗೆ 6 ರನ್ ಅವಶ್ಯಕತೆ ಇತ್ತು. ಧವನ್ ಶತಕಕ್ಕೆ ಕೇವಲ 3 ರನ್ ಬೇಕಿತ್ತು. ಆದರೆ ಕ್ರೀಸ್‌ಗೆ ಬಂದ ಕೊಲಿನ್ ಇನ್‌ಗ್ರಾಂ ಭರ್ಜರಿ ಸಿಕ್ಸರಿ  ಸಿಡಿಸಿ ಡೆಲ್ಲಿಗೆ 7 ವಿಕೆಟ್ ಗೆಲುವು ತಂದುಕೊಟ್ಟರು. ಇತ್ತ ಧವನ್ ಅಜೇಯ 97 ರನ್ ಸಿಡಿಸಿ ಶತಕ ಪೂರೈಸಲು ಸಾಧ್ಯವಾಗಲಿಲ್ಲ.