ಐಪಿಎಲ್ 12ನೇ ಆವೃತ್ತಿಯಲ್ಲಿ 30 ದಾಟಿದ ಅನುಭವಿ ಆಟಗಾರರಿಂದ ಕೂಡಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಯುವಕರು ಚಾಲೆಂಜ್ ಹಾಕಿದ್ದಾರೆ. ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಉಭಯ ತಂಡಗಳಿಗೆ ಇಂದು ಕಠಿಣ ಸವಾಲು ಎದುರಾಗಲಿದೆ.
ನವದೆಹಲಿ(ಮಾ.26): ಐಪಿಎಲ್ 12ನೇ ಆವೃತ್ತಿ ರಂಗೇರುತ್ತಿದೆ. ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚುತ್ತಿದ್ದು, ಮಂಗಳವಾರದ ಪಂದ್ಯ ಹಲವು ವಿಚಾರಗಳಿಂದ ಮಹತ್ವ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು, ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
"
ಚೆನ್ನೈನ ಹಿರಿಯ ಹಾಗೂ ಅನುಭವಿಗಳು ಹಾಗೂ ಡೆಲ್ಲಿಯ ಯುವ ಹಾಗೂ ಸ್ಫೋಟಕ ಆಟಗಾರರ ನಡುವಿನ ಕಾಳಗ ಎಲ್ಲರ ಕುತೂಹಲ ಕೆರಳಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 27 ಎಸೆತಗಳಲ್ಲಿ 78 ರನ್ ಸಿಡಿಸಿ ಮಿಂಚಿದ್ದ ರಿಷಭ್ ಪಂತ್, ಚತುರ ನಾಯಕ ಎಂ.ಎಸ್.ಧೋನಿ ತಲೆಗೆ ಹೆಚ್ಚಿನ ಕೆಲಸ ಕೊಟ್ಟಿದ್ದಾರೆ. ಡೆಲ್ಲಿ ಬ್ಯಾಟಿಂಗ್ ವೀರನನ್ನು ಕಟ್ಟಿಹಾಕುವುದು ಚೆನ್ನೈನ ಬಹುಮುಖ್ಯ ಗುರಿಯಾಗಲಿದೆ.
ಇದನ್ನೂ ಓದಿ: IPL 2019: ರಾಜಸ್ಥಾನಕ್ಕೆ ಸೋಲಿನ ಶಾಕ್ ನೀಡಿದ ಪಂಜಾಬ್
ಕೋಟ್ಲಾ ಮೈದಾನದಲ್ಲಿ ಚೆನ್ನೈ ವಿರುದ್ಧ ಡೆಲ್ಲಿ ದಾಖಲೆ ಉತ್ತಮವಾಗಿಲ್ಲ. ಸ್ಪಿನ್ ಸ್ನೇಹಿ ಪಿಚ್ ಆಗಿರುವ ಕಾರಣ, ಸಿಎಸ್‌ಕೆ ತನ್ನ ಮೂವರು ಸ್ಪಿನ್ ಅಸ್ತ್ರಗಳನ್ನು ಬಳಕೆ ಮಾಡಿಕೊಳ್ಳಲಿದೆ. ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್ ಹಾಗೂ ರವೀಂದ್ರ ಜಡೇಜಾ ಎದುರು ರನ್ ಗಳಿಸುವುದು ಡೆಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿ ಪರಿಣಮಿಸಲಿದೆ. ಸುರೇಶ್ ರೈನಾ, ಕೇದಾರ್ ಜಾಧವ್ ಸಹ ಉಪಯುಕ್ತ ಕೊಡುಗೆ ನೀಡಬಲ್ಲರು. ನಿಧಾನಗತಿಯ ಬೌಲರ್‌ಗಳ ಎದುರು ಪಂತ್ ಪರದಾಡುತ್ತಾರೆ ಎನ್ನುವ ಅಂಶ ಧೋನಿಗೆ ಚೆನ್ನಾಗೇ ತಿಳಿದಿದೆ. ಹೀಗಾಗಿ, ಸ್ಪಿನ್ನರ್‌ಗಳನ್ನು ಮುಂದಿಟ್ಟುಕೊಂಡು ಪಂದ್ಯ ಗೆಲ್ಲುವುದು ಧೋನಿಯ ರಣತಂತ್ರವಾಗಲಿದೆ. ಮೊದಲ ಪಂದ್ಯದಲ್ಲಿ ಕೊಹ್ಲಿ, ಎಬಿಡಿಯನ್ನು ಔಟ್ ಮಾಡಿದ್ದ ಹರ್ಭಜನ್, ರಿಷಭ್‌ಗೂ ಪೆವಿಲಿಯನ್ ದಾರಿ ತೋರಿಸಲು ಕಾಯುತ್ತಿದ್ದಾರೆ.
ಡೆಲ್ಲಿ ತಂಡದಲ್ಲಿ ಕೇವಲ ರಿಷಭ್ ಪಂತ್ ಮಾತ್ರ ಸ್ಫೋಟಕ ಆಡಬಲ್ಲರು ಎಂದು ತಿಳಿದುಕೊಂಡರೆ ತಪ್ಪಾಗಲಿದೆ. ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಕಾಲಿನ್ ಇನ್‌ಗ್ರಾಂ ಪೈಕಿ ಒಬ್ಬರು ಕ್ರೀಸ್‌ನಲ್ಲಿ ನೆಲೆಯೂರಿದರೆ ರನ್ ಹೊಳೆ ಹರಿಯುವುದು ಖಚಿತ. ಹೀಗಾಗಿ, ಚೆನ್ನೈ ಬೌಲರ್‌ಗಳು ಎಚ್ಚರಿಕೆಯಿಂದ ದಾಳಿ ಸಂಘಟಿಸಬೇಕಿದೆ.
ಇದನ್ನೂ ಓದಿ: IPL 2019: ರಾಜಸ್ಥಾನ ವಿರುದ್ಧ ಅಬ್ಬರಿಸಿ ದಾಖಲೆ ಬರೆದ ಗೇಲ್!
ಡೆಲ್ಲಿಯ ಬೌಲಿಂಗ್ ಪಡೆ ಸಹ ಬ್ಯಾಟಿಂಗ್‌ನಷ್ಟೇ ಬಲಿಷ್ಠವಾಗಿದೆ. ಕಗಿಸೋ ರಬಾಡ, ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮಾ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ದಾಳಿ ನಡೆಸಿ ಯಶಸ್ಸು ಕಂಡಿದ್ದಾರೆ. ಆದರೆ ತಂಡದ ಸ್ಪಿನ್ ಬೌಲಿಂಗ್ ಪಡೆ ದುರ್ಬಲವಾಗಿದೆ. ಇದು ಸಿಎಸ್‌ಕೆಗೆ ಲಾಭವಾಗಲಿದೆ. ಶೇನ್ ವಾಟ್ಸನ್, ಸುರೇಶ್ ರೈನಾ, ಅಂಬಟಿ ರಾಯುಡು ಸೇರಿ ಚೆನ್ನೈನ ಬ್ಯಾಟಿಂಗ್ ಘಟಾನುಘಟಿಗಳು ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲರು. ನೇಪಾಳದ ಸ್ಪಿನ್ನರ್ ಸಂದೀಪ್ ಲಮಿಚ್ಚಾನೆಯನ್ನು ಕಣಕ್ಕಿಳಿಸಿ ವಿಂಡೀಸ್‌ನ ಕೀಮೋ ಪೌಲ್‌ರನ್ನು ಕೈಬಿಡುವ ಸಾಧ್ಯತೆ ಇದೆ. ಅಕ್ಷರ್ ಪಟೇಲ್ ಜಾಗದಲ್ಲಿ ಹನುಮ ವಿಹಾರಿಯನ್ನು ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.
ಎಂ.ಎಸ್.ಧೋನಿ ಈ ಪಂದ್ಯದಲ್ಲಿ ಮೇಲ್ಕ್ರಮಾಂಕದಲ್ಲಿ ಆಡಲಿದ್ದಾರಾ ಎನ್ನುವ ಕುತೂಹಲವಿದೆ. ತಂಡಕ್ಕೆ ಆರ್‌ಸಿಬಿ ವಿರುದ್ಧ ಉತ್ತಮ ನೆಟ್ ರನ್‌ರೇಟ್‌ನೊಂದಿಗೆ ಗೆಲ್ಲುವ ಅವಕಾಶವಿತ್ತು. ಆದರೆ ನಿಧಾನಗತಿಯ ಆಟಕ್ಕೆ ಮುಂದಾಗಿ ಅವಕಾಶ ಕೈಚೆಲ್ಲಿತ್ತು. ಈ ಪಂದ್ಯದಲ್ಲಿ ಚೆನ್ನೈ ಉತ್ತಮ ನೆಟ್ ರನ್‌ರೇಟ್ ಪಡೆಯಲು ಎದುರು ನೋಡಲಿದೆ.
ಇದನ್ನೂ ಓದಿ: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷ ಅಭಿಮಾನಿಗೆ ನೀಡಿದ ರಸೆಲ್!
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಶೇನ್ ವಾಟನ್ಸ್, ಅಂಬಟಿ ರಾಯುಡು, ಸುರೇಶ್ ರೈನಾ, ಎಂ.ಎಸ್.ಧೋನಿ (ನಾಯಕ), ಕೇದಾರ್ ಜಾಧವ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಾಹರ್, ಹರ್ಭಜನ್ ಸಿಂಗ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.
ಡೆಲ್ಲಿ: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಕಾಲಿನ್ ಇನ್‌ಗ್ರಾಂ, ಕೀಮೋ ಪೌಲ್, ಅಕ್ಷರ್ ಪಟೇಲ್, ರಾಹುಲ್ ತೆವಾಟಿಯಾ, ಕಗಿಸೋ ರಬಾಡ, ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮಾ.
ಸ್ಥಳ: ನವದೆಹಲಿ, ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್ 1
ಒಟ್ಟು ಮುಖಾಮುಖಿ: 18
ಚೆನ್ನೈ: 12
ಡೆಲ್ಲಿ: 06
ಪ್ರಾಬಲ್ಯ
ಅನುಭವಿ ಬ್ಯಾಟ್ಸ್‌ಮನ್‌ಗಳ ದಂಡು
ಎಂ.ಎಸ್.ಧೋನಿ ನಾಯಕತ್ವದ ಬಲ
ಹರ್ಭಜನ್, ತಾಹಿರ್ ಸ್ಪಿನ್ ಅಸ್ತ್ರ
ಉತ್ತಮ ಲಯದಲ್ಲಿ ಆರಂಭಿಕ ಧವನ್
ರಿಷಭ್ ಪಂತ್ ತಂಡದ ಟ್ರಂಪ್‌ಕಾರ್ಡ್
ಬೌಲ್ಟ್, ರಬಾಡ ಬೌಲಿಂಗ್ ಶಕ್ತಿ
ದೌರ್ಬಲ್ಯ
ರಾಯುಡು ನಿಧಾನಗತಿಯ ಆಟ
ವೇಗಿಗಳ ಎದುರು ಕುಸಿಯುವ ಭೀತಿ
ಅನುಭವಿ ಭಾರತೀಯ ವೇಗಿಯ ಕೊರತೆ
ಸ್ಪಿನ್ನರ್‌ಗಳನ್ನು ವಿರುದ್ಧ ತಿಣುಕಾಡುವ ಸಾಧ್ಯತೆ
ಕೆಳ ಮಧ್ಯಮ ಕ್ರಮಾಂಕ ದುರ್ಬಲ
ಅನುಭವಿ ಸ್ಪಿನ್ ಬೌಲರ್‌ನ ಕೊರತೆ
ಪಿಚ್ ರಿಪೋರ್ಟ್
ಕೋಟ್ಲಾ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿರಲಿದೆ. ಸ್ಪಿನ್ ಬೌಲಿಂಗ್‌ಗೆ ಇಲ್ಲಿನ ಪಿಚ್ ಸೂಕ್ತ ಎನಿಸಿದೆ. ಇಲ್ಲಿ ನಡೆದಿರುವ ಒಟ್ಟು 67 ಐಪಿಎಲ್ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 32 ಬಾರಿ ಗೆದ್ದರೆ, 34 ಪಂದ್ಯಗಳಲ್ಲಿ ಮೊದಲು ಫೀಲ್ಡ್ ಮಾಡಿದ ತಂಡ ಜಯಿಸಿದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 163 ರನ್ ಆಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 26, 2019, 12:16 PM IST