ಸತತ 6ನೇ ಸೋಲಿಗೆ ಸಾಕ್ಷಿಯಾದ RCB..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಪಂದ್ಯದಲ್ಲೂ ಹೀನಾಯ ಸೋಲು ಕಂಡಿದೆ. ಬೆಂಗಳೂರು ಎದುರು ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ.
ಬೆಂಗಳೂರು[ಏ.07]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನ ಮತ್ತೊಮ್ಮೆ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಅನಾವರಣಗೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಎದುರು 7 ವಿಕೆಟ್’ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ ವಿರಾಟ್ ಸತತ 6ನೇ ಸೋಲಿನ ಕಹಿಯುಂಡಿದೆ.
IPL 12 RCB ಪಡೆಗೆ ಶಾಕ್ ಕೊಟ್ಟ ರಬಾಡ
RCB ನೀಡಿದ್ದ 150 ರನ್’ಗಳ ಸಾದಾರಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಧವನ್[0] ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ಆ ಬಳಿಕ ಜತೆಯಾದ ನಾಯಕ ಶ್ರೇಯಸ್ ಅಯ್ಯರ್-ಪೃಥ್ವಿ ಶಾ ಜೋಡಿ 68 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಪೃಥ್ವಿ ಕೇವಲ 22 ಎಸೆತಗಳಲ್ಲಿ 5 ಬೌಂಡರಿ ಸಹಿತ 28 ರನ್ ಬಾರಿಸಿ ಪವನ್ ನೇಗಿಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ನೆಲಕಚ್ಚಿ ಆಡಿದ ನಾಯಕ ಶ್ರೇಯಸ್ ಅಯ್ಯರ್ 50 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 67 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕಾಲಿನ್ ಇಂಗ್ರಾಮ್[22], ರಿಷಭ್ ಪಂತ್[18] ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ನವದೀಪ್ ಶೈನಿ 2, ಟಿಮ್ ಸೌಥಿ, ಪವನ್ ನೇಗಿ, ಮೊಯಿನ್ ಅಲಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಬೆಂಗಳೂರು ತಂಡ ನಾಯಕ ಕೊಹ್ಲಿ[41] ಹಾಗೂ ಮೊಯಿನ್ ಅಲಿ[32] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 149 ರನ್ ಬಾರಿಸಿತ್ತು. ರಬಾಡ 4 ವಿಕೆಟ್ ಕಬಳಿಸುವ ಮೂಲಕ ಆರ್’ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು.