ಸಾತ್ವಿಕ್-ಚಿರಾಗ್ಗೆ ಇಂಡೋನೇಷ್ಯಾ ಸೂಪರ್ 1000 ಕಿರೀಟ! ಏನಿದು ಸೂಪರ್ 1000 ಟೂರ್ನಿ?
ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಐತಿಹಾಸಿಕ ಸಾಧನೆ
ಸೂಪರ್ 1000 ಮಟ್ಟದ ಟೂರ್ನಿ ಗೆದ್ದ ಭಾರತದ ಮೊದಲ ಜೋಡಿ
ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ನರಾದ ಮಲೇಷ್ಯಾದ ಆ್ಯರೊನ್-ಸೊಗ್ ವೊಯ್ ವಿರುದ್ಧ 21-17, 21-18 ಜಯ
ಜಕಾರ್ತ(ಜೂ.19): ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಅಲಂಕರಿಸುವ ಮೂಲಕ ಭಾರತದ ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಲ್ಲದೇ ಬಿಡಬ್ಲ್ಯುಎಫ್ ಸೂಪರ್ 1000 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೊದಲು ಸೂಪರ್ 1000 ಮಟ್ಟದ ಟೂರ್ನಿಗಳಲ್ಲಿ ಭಾರತದ ಯಾವ ಜೋಡಿಯೂ ಸೆಮಿಫೈನಲ್ ದಾಟಿರಲಿಲ್ಲ.
ವಿಶ್ವ ರ್ಯಾಂಕಿಂಗ್ನಲ್ಲಿ 6ನೇ ಸ್ಥಾನದಲ್ಲಿರುವ, ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್ ಭಾರತೀಯ ಜೋಡಿ ಭಾನುವಾರ 43 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ಮಲೇಷ್ಯಾದ ಆ್ಯರೊನ್ ಚಿಯಾ ಹಾಗೂ ಸೊಗ್ ವೂಯ್ ಯಿಕ್ ವಿರುದ್ಧ 21-17, 21-18 ನೇರ ಗೇಮ್ಗಳಲ್ಲಿ ಗೆಲುವು ಸಾಧಿಸಿತು. ಹಾಲಿ ವಿಶ್ವ ಚಾಂಪಿಯನ್ ಮಲೇಷ್ಯಾ ಜೋಡಿ ಪಂದ್ಯದುದ್ದಕ್ಕೂ ತೀವ್ರ ಪೈಪೋಟಿ ಒಡ್ಡಿದರೂ ಕೊನೆವರೆಗೂ ಹೋರಾಟ ಬಿಡದ ಭಾರತೀಯ ಶಟ್ಲರ್ಗಳು ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಯಶಸ್ವಿಯಾದರು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಜೋಡಿಯು ವಿಶ್ವ ನಂ.1, ಇಂಡೋನೇಷ್ಯಾದ ಫಜರ್ ಅಲ್ಫಿಯಾನ್-ಮೊಹಮದ್ ರಿಯಾನ್ ವಿರುದ್ಧ ಜಯಿಸಿತ್ತು.
ಭಾರತಕ್ಕೆ 5ನೇ ಪ್ರಶಸ್ತಿ: ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಭಾರತ 5ನೇ ಬಾರಿ ಚಾಂಪಿಯನ್ ಎನಿಸಿಕೊಂಡಿತು. ಈ ಮೊದಲು ಮಹಿಳಾ ಸಿಂಗಲ್ಸ್ನಲ್ಲಿ ಸೈನಾ ನೆಹ್ವಾಲ್ 2009, 2010 ಹಾಗೂ 2012ರಲ್ಲಿ ಪ್ರಶಸ್ತಿ ಗೆದ್ದಿದ್ದರೆ, ಪುರುಷರ ಸಿಂಗಲ್ಸ್‌ನ ಏಕೈಕ ಪ್ರಶಸ್ತಿಯನ್ನು ಕಿದಂಬಿ ಶ್ರೀಕಾಂತ್ 2017ರಲ್ಲಿ ಜಯಿಸಿದ್ದರು. ಇದೇ ಮೊದಲ ಬಾರಿ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಪ್ರಶಸ್ತಿ ಒಲಿದಿದೆ.
ಎಲ್ಲಾ ಐದು ಸೂಪರ್ ಟೂರ್ನಿಯಲ್ಲೂ ಪ್ರಶಸ್ತಿ!
ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್(ಬಿಡಬ್ಲ್ಯುಎಫ್) ಆಯೋಜಿಸುವ ಎಲ್ಲಾ 5 ದರ್ಜೆ ಸೂಪರ್ ಟೂರ್ನಿಗಳಲ್ಲಿ ಸಾತ್ವಿಕ್-ಚಿರಾಗ್ ಚಾಂಪಿಯನ್ ಆಗಿದ್ದಾರೆ. 2018ರಲ್ಲಿ ಹೈದರಾಬಾದ್ ಓಪನ್(ಸೂಪರ್ 100), 2023ರಲ್ಲಿ ಸ್ವಿಸ್ ಓಪನ್(ಸೂಪರ್ 300), 2019ರಲ್ಲಿ ಥಾಯ್ಲೆಂಡ್ ಓಪನ್(ಸೂಪರ್ 500), 2022ರಲ್ಲಿ ಇಂಡಿಯಾ ಓಪನ್(ಸೂಪರ್ 500), 2022ರಲ್ಲಿ ಫ್ರೆಂಚ್ ಓಪನ್(ಸೂಪರ್ 750) ಹಾಗೂ ಈ ಬಾರಿ ಇಂಡೋನೇಷ್ಯಾ ಓಪನ್(ಸೂಪರ್ 1000) ಪ್ರಶಸ್ತಿ ಗೆದ್ದಿದ್ದಾರೆ.
ಅಂತಾರಾಜ್ಯ ಅಥ್ಲೆಟಿಕ್ಸ್ ಕೂಟ: ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದ ಶ್ರೀಶಂಕರ್
ಏನಿದು ಸೂಪರ್ 1000 ಟೂರ್ನಿ?
ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್(ಬಿಡಬ್ಲ್ಯುಎಫ್) ಪ್ರತಿ ವರ್ಷ ಒಟ್ಟು 6 ದರ್ಜೆಗಳ ಟೂರ್ನಿಯನ್ನು ಆಯೋಜಿಸುತ್ತದೆ. ಅದರಲ್ಲಿ ವಿಶ್ವ ಟೂರ್ ಫೈನಲ್ಸ್ ಅತ್ಯುಷ್ಕೃಷ್ಟ ಮಟ್ಟದ್ದು. ವಿವಿಧ ದರ್ಜೆಗಳ ಟೂರ್ನಿಗಳಲ್ಲಿ ಗೆದ್ದು ಗಳಿಸುವ ಒಟ್ಟು ಅಂಕಗಳ ಆಧಾರದಲ್ಲಿ ಅಗ್ರ 8 ಶಟ್ಲರ್‌ಗಳಿಗೆ ವಿಶ್ವ ಟೂರ್ ಫೈನಲ್ಸ್‌ನಲ್ಲಿ ಆಡುವ ಅರ್ಹತೆ ಸಿಗಲಿದೆ. ಸೂಪರ್ 1000 ಟೂರ್ನಿ ಎಂದರೆ ಉತ್ಕೃಷ್ಟ ಮಟ್ಟದ ಟೂರ್ನಿ. ವರ್ಷದಲ್ಲಿ 4 ಸೂಪರ್ 1000 ಟೂರ್ನಿಗಳು ನಡೆಯಲಿವೆ. ಅದೇ ರೀತಿ 6 ಸೂಪರ್ 750, 7 ಸೂಪರ್ 500, 11 ಸೂಪರ್ 300, ಜೊತೆಗೆ ಕೆಲ ಸೂಪರ್ 100 ಟೂರ್ನಿಗಳು ನಡೆಯಲಿವೆ. ಶಟ್ಲರ್‌ಗಳಿಗೆ ದೊರೆಯುವ ವಿಶ್ವ ರ‍್ಯಾಂಕಿಂಗ್ ಅಂಕಗಳು, ಬಹುಮಾನ ಮೊತ್ತ, ಸ್ಪರ್ಧಿಸುವ ಶಟ್ಲರ್‌ಗಳ ವಿಶ್ವ ರ‍್ಯಾಂಕಿಂಗ್ ಆಧಾರದಲ್ಲಿ ಟೂರ್ನಿಗಳನ್ನು ವಿವಿಧ ದರ್ಜೆಗಳಾಗಿ ವಿಂಗಡಿಸಲಾಗಿದೆ. ಭಾರತದಲ್ಲಿ ನಡೆಯುವ ಇಂಡಿಯಾ ಓಪನ್ ಟೂರ್ನಿ ಸೂಪರ್ 750 ಮಟ್ಟದಾಗಿದ್ದರೆ, ಸಯ್ಯದ್ ಮೋದಿ ಅಂ.ರಾ.ಟೂರ್ನಿ ಸೂಪರ್ 300 ಮಟ್ಟದ್ದು. ಹೈದ್ರಾಬಾದ್ ಓಪನ್, ಒಡಿಶಾ ಓಪನ್ ಟೂರ್ನಿಗಳು ಸೂಪರ್ 100 ಮಟ್ಟದ ಟೂರ್ನಿಗಳಾಗಿವೆ.
ಏಷ್ಯಾನೆಟ್ ನ್ಯೂಸ್ ಜೊತೆ ಸಂತಸ ಹಂಚಿಕೊಂಡ ಕೋಚ್ ಗೋಪಿಚಂದ್
ಫೈನಲ್ ಪಂದ್ಯ ಮುಗಿದ ಕೂಡಲೇ ಸಾತ್ವಿಕ್-ಚಿರಾಗ್ ಐತಿಹಾಸಿಕ ಸಾಧನೆ ಬಗ್ಗೆ ರಾಷ್ಟ್ರೀಯ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಏಷ್ಯಾನೆಟ್ ನ್ಯೂಸ್ ಜೊತೆ ಸಂತಸ ಹಂಚಿಕೊಂಡಿದ್ದಾರೆ. ‘ಇದು ನನ್ನ ಕೋಚಿಂಗ್ ವೃತ್ತಿಜೀವನದ ಅತ್ಯಂತ ತೃಪ್ತಿದಾಯಕ ಕ್ಷಣ. ಸಾತ್ವಿಕ್-ಚಿರಾಗ್ ಈ ಟೂರ್ನಿ ಮತ್ತು ಇತ್ತೀಚಿನ ದಿನಗಳಲ್ಲಿ ಆಡುತ್ತಿರುವ ರೀತಿ ಅವರು ಟೂರ್ನಿಯಲ್ಲಿ ಗೆದ್ದಿದ್ದಕ್ಕಿಂತ ಅದ್ಭುತ. ವಿಶ್ವ ನಂ.1 ಹಾಗೂ ವಿಶ್ವ ಚಾಂಪಿಯನ್ ಜೋಡಿಯನ್ನು ಸುಲಭದಲ್ಲಿ ಸೋಲಿಸುವುದು ಭಾರತೀಯ ಬ್ಯಾಡ್ಮಿಂಟನ್ ಪಾಲಿಗೆ ಉತ್ತಮ’ ಎಂದಿದ್ದಾರೆ.