ಜೈಪುರ(ಮೇ.19): ಭಾರತೀಯ ಚಾಂಪಿಯನ್ ಓಟಗಾರ್ತಿ ದ್ಯುತಿ ಚಾಂದ್ ಸಂಗಾತಿ ವಿಚಾರ ಬಹಿರಂಗ ಪಡಿಸಿದ್ದಾರೆ. ಸಲಿಂಗಿ ಜೊತೆ ಸಂಬಂಧ ಹೊಂದಿರುವುದಾಗಿ ದ್ಯುತಿ ಚಾಂದ್ ಹೇಳಿದ್ದಾರೆ. 2018ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ದ್ಯುತಿ ಚಾಂದ್ ಮದುವೆ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ. ಈ ಮೂಲಕ  ಕ್ರೀಡಾಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

ಇದನ್ನೂ ಓದಿ: ಇಥೋಪಿಯಾದ ಅನ್ದಮ್ಲಾಕ್- ಕೀನ್ಯಾದ ಆ್ಯಗ್ನೆಸ್‌ಗೆ ಮಡಿಲಿಗೆ ಬೆಂಗಳೂರು 10K!

‘ನಾನು ಕಳೆದ 5 ವರ್ಷಗಳಿಂದ ನನ್ನೂರಿನ ಯುವತಿಯೊಬ್ಬಳ ಜತೆ ಸಂಬಂಧ ಹೊಂದಿದ್ದೇನೆ. ಆಕೆಗೀಗ 19 ವರ್ಷ,ಭುವನೇಶ್ವರದ ಕಾಲೇಜಿನಲ್ಲಿ ದ್ವಿತೀಯ ವರ್ಷ ಬಿ.ಎ. ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ನಮ್ಮ ಕುಟುಂಬದ ಸಂಬಂಧಿ ಕೂಡಾ ಹೌದು. ನಾನು ಮನೆಗೆ ಹೋದಾಗ ಆಕೆಯೊಂದಿಗೆ ಕಾಲ ಕಳೆಯುತ್ತೇನೆ. ಆಕೆ ನನ್ನ ಸಂಗಾತಿಯಿದ್ದಂತೆ. ಅವಳೊಂದಿಗೆ ಮುಂದಿನ ಜೀವನ ಕಳೆಯುವುದು ನನ್ನ ಬಯಕೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ತಮ್ಮ ಸಂಗಾತಿಯ ಹೆಸರನ್ನು ದ್ಯುತಿ ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಕಂಠೀರವ ಜಿಮ್‌ಗೆ ಕ್ರೀಡಾಳುಗಳಿಗಿಲ್ಲ ಪ್ರವೇಶ!

ಕಳೆದ ವರ್ಷ ಸುಪ್ರೀಂ ಕೋರ್ಟ್‌ ಸಲಿಂಗ ಕಾಮ ಅಪರಾಧವಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಭಾರತದಲ್ಲಿ ಒಂದೇ ಲಿಂಗದ ಇಬ್ಬರು ಮದುವೆಯಾಗಲು ಇನ್ನೂ ಅನುಮತಿ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪು ತಾವು ಬಹಿರಂಗವಾಗಿ ಸಲಿಂಗ ಕಾಮ ಒಪ್ಪಿಕೊಳ್ಳಲು ಧೈರ್ಯ ನೀಡಿತು ಎಂದು ದ್ಯುತಿ ಹೇಳಿಕೊಂಡಿದ್ದಾರೆ. ‘ನಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ನನ್ನ ಸಂಗಾತಿ ಒಪ್ಪಿಗೆ ಸೂಚಿಸಿದಳು. ಮುಂದೆ ಏನೇ ಸಮಸ್ಯೆ ಬಂದರೂ ಎದುರಿಸಲು ಸಿದ್ಧವಿದ್ದೇವೆ. ವೈಯಕ್ತಿಕ ಸ್ವಾತಂತ್ರ್ಯದಲ್ಲಿ ನನಗೆ ನಂಬಿಕೆಯಿದೆ. ನನ್ನ ಜೀವನವನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂದು ನಿರ್ಧರಿಸುವ ಹಕ್ಕು ನನ್ನದೇ ಆಗಿರುತ್ತದೆ’ ಎಂದು ದ್ಯುತಿ ಹೇಳಿದ್ದಾರೆ.

ಸಹೋದರಿಯಿಂದ ಬೆದರಿಕೆ!

ಸಲಿಂಗಕಾಮದ ವಿಷಯ ಬಹಿರಂಗಪಡಿಸುತ್ತಿದ್ದಂತೆ ದ್ಯುತಿಗೆ ಕುಟುಂಬ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದೆ. ‘ನನ್ನ ತಂದೆ, ತಾಯಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ನನ್ನ ಹಿರಿಯ ಸಹೋದರಿ ನನ್ನನ್ನು ಕುಟುಂಬದಿಂದ ಹೊರಹಾಕುವುದಾಗಿ ಬೆದರಿಸುತ್ತಿದ್ದು, ಜೈಲಿಗೆ ಹಾಕಿಸುವುದಾಗಿಯೂ ಹೇಳುತ್ತಿದ್ದಾರೆ. ನಮ್ಮ ಮನೆಯಲ್ಲಿ ಹಿರಿಯ ಸಹೋದರಿಯೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಈ ಹಿಂದೆ ನನ್ನ ಸಹೋದರನನ್ನು ಮನೆಯಿಂದ ಹೊರಹಾಕಿದ್ದಾಳೆ’ ಎಂದು ದ್ಯುತಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಹಿರಂಗಪಡಿಸಲು ಕಾರಣವೇನು?

ಕೆಲ ವರ್ಷಗಳ ಹಿಂದೆ ಓಟಗಾರ್ತಿ ಪಿಂಕಿ ಪ್ರಾಮಾಣಿಕ್‌ ಜತೆಯಿದ್ದ ಸಂಗಾತಿ, ಆಕೆ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದು. ಪಿಂಕಿ, ಜೈಲುವಾಸ ಅನುಭವಿಸಿದ್ದರು. ವೈದ್ಯಕೀಯ ತಪಾಸಣೆ ವೇಳೆ ಆಕೆ ಹೆಣ್ಣಲ್ಲ, ಗಂಡು ಎನ್ನುವ ವಿಷಯ ಹೊರಬಿದ್ದಿತ್ತು. ‘ಪಿಂಕಿಯ ಸ್ಥಿತಿ ನಮಗೆ ಬರಬಾರದು ಎನ್ನುವ ಕಾರಣಕ್ಕೆ ನಮ್ಮ ಸಂಬಂಧವನ್ನು ಬಹಿರಂಗಪಡಿಸುತ್ತಿದ್ದೇವೆ’ ಎಂದು ದ್ಯುತಿ ಹೇಳಿಕೊಂಡಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.