Asianet Suvarna News

ಕಂಠೀರವ ಜಿಮ್‌ಗೆ ಕ್ರೀಡಾಳುಗಳಿಗಿಲ್ಲ ಪ್ರವೇಶ!

ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಿಸಿರುವ ಆಧುನಿಕ ಜಿಮ್‌| ಕ್ರೀಡಾಪಟುಗಳು ಸೌಲಭ್ಯ ಪಡೆಯಬೇಕಿದ್ದರೆ ಮಾಸಿಕ 2000 ರೂ ಪಾವತಿಸಬೇಕು| ಕಿಷ್ಕಿಂದೆಯಂತಿರುವ ಕೋಣೆಯನ್ನೇ ಜಿಮ್‌ ಆಗಿಸಿಕೊಂಡು ಕ್ರೀಡಾಳುಗಳ ಅಭ್ಯಾಸ| ಹತ್ತಾರು ಸಮಸ್ಯೆಗಳಿದ್ದರೂ ತಲೆಕೆಡಿಸಿಕೊಳ್ಳದ ಕ್ರೀಡಾ ಇಲಾಖೆ

Athletics gym entry restricted in Kanteerava stadium bengaluru
Author
Bengaluru, First Published May 19, 2019, 10:13 AM IST
  • Facebook
  • Twitter
  • Whatsapp

ಬೆಂಗಳೂರು(ಮೇ.19): ಕರ್ನಾಟಕದ ಹೆಮ್ಮೆಯ ಕಂಠೀರವ ಕ್ರೀಡಾಂಗಣದಲ್ಲಿ ಕೆದಕಿದಷ್ಟುಸಮಸ್ಯೆಗಳು ಬಹಿರಂಗಗೊಳ್ಳುತ್ತಿವೆ. ಗುಂಡಿ ಬಿದ್ದ ರಸ್ತೆಯಂತಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ನಿಂದ ಕ್ರೀಡಾಪಟುಗಳಿಗೆ ಆಗುತ್ತಿರುವ ತೊಂದರೆ ಕುರಿತು ‘ಕನ್ನಡಪ್ರಭ’ ವಿಸೃತವಾಗಿ ವರದಿ ಪ್ರಕಟಿಸಿತ್ತು. ಇದೀಗ ಕ್ರೀಡಾಂಗಣದ ಇನ್ನಿತರ ಸಮಸ್ಯೆಗಳ ಕುರಿತು ರಾಜ್ಯ ಕ್ರೀಡಾ ಇಲಾಖೆಯ ಗಮನಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕಂಠೀರವ ಟ್ರ್ಯಾಕ್ ತುಂಬಾ ಗುಂಡಿ - ನಿರ್ವಹಣೆಗಿಲ್ಲ ಸಿಬ್ಬಂದಿ!

ಕಳೆದ ವರ್ಷ ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು .3 ಕೋಟಿಗೂ ಹೆಚ್ಚು ಖರ್ಚು ಮಾಡಿ ಆಧುನಿಕ ಮಲ್ಟಿಜಿಮ್‌ ತೆರೆಯಲಾಗಿತ್ತು. ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುವ ಕ್ರೀಡಾಪಟುಗಳು ತಮ್ಮ ಫಿಟ್ನೆಸ್‌ಗಾಗಿ ಸರ್ಕಾರ ಹೊಸ ಜಿಮ್‌ ಆರಂಭಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಆದರೆ ವಾಸ್ತವವಾಗಿ ಜಿಮ್‌ ಆರಂಭಿಸಿದ್ದು ಕ್ರೀಡಾಪಟುಗಳಿಗಲ್ಲ. ಇಲ್ಲಿನ ಮಲ್ಟಿಜಿಮ್‌ನಲ್ಲಿ ಅಭ್ಯಾಸ ನಡೆಸಲು ಕ್ರೀಡಾಪಟುಗಳಿಗೆ ಅವಕಾಶವೇ ಇಲ್ಲದಂತಾಗಿದೆ.

ಇದನ್ನೂ ಓದಿ: ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ- ಪದಕ ಬೇಟೆ ಹೇಗೆ?

ಕ್ರೀಡಾಭಿವೃದ್ಧಿಗಾಗಿ ಸಾಕಷ್ಟುಯೋಜನೆ ತರುವ ಸರ್ಕಾರ, ಅಥ್ಲೀಟ್‌ಗಳು ಪ್ರತಿನಿತ್ಯ ಅನುಭವಿಸುವ ಗೋಳನ್ನು ಮಾತ್ರ ಕೇಳುತ್ತಿಲ್ಲ. ಅಥವಾ ಕಂಡರೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿದೆ. ಪದಕ ಗೆದ್ದರೆ ಹಾಗೆ ಮಾಡ್ತೀವಿ.. ಹೀಗೆ ಮಾಡ್ತೀವಿ.. ಅಂತಾ ಹೇಳುವ ಸರ್ಕಾರ, ಅಥ್ಲೀಟ್‌ಗಳನ್ನು ಪೋಷಿಸುವ ಬದಲು ಕ್ರೀಡೆಯಿಂದ ದೂರ ಉಳಿಯುವಂತೆ ಮಾಡುತ್ತಿದೆ.

ಭವಿಷ್ಯದ ತಾರೆಗಳಿಗೆ ಸಂಕಷ್ಟ: ನೆರೆ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ರಾಹ ದೊರೆಯುತ್ತದೆ. ಆದರೆ ರಾಜ್ಯದ ಅಥ್ಲೀಟ್‌ಗಳು ಹಾಳಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌, ಸೂಕ್ತ ಸಾಮಾಗ್ರಿಗಳಿಲ್ಲದ ಜಿಮ್‌ ಹೀಗೆ ಹತ್ತು ಹಲವು ನ್ಯೂನ್ಯತೆ ಇದ್ದರೂ ಅಥ್ಲೀಟ್‌ಗಳು ಅಭ್ಯಾಸ ನಿಲ್ಲಿಸಿಲ್ಲ. ಆದರೆ ಇಲಾಖೆಯ ಧೋರಣೆ ಹೀಗೇ ಮುಂದುವರಿದರೆ, ಕ್ರೀಡಾಪಟುಗಳು ಕ್ರೀಡೆಯನ್ನು ತೊರೆಯಲು ನಿರ್ಧರಿಸಿದರೆ ಅಚ್ಚರಿಯಿಲ್ಲ.

ಇದನ್ನೂ ಓದಿ: ಕಂಠೀರವ ಟ್ರ್ಯಾಕ್ ಕಾಪಾಡೋದು ಹೇಗೆ..?

ಜಿಮ್‌ ಪ್ರವೇಶಕ್ಕೆ ಕಟ್ಟಬೇಕು ಹಣ: ಕಂಠೀರವದಲ್ಲಿ ಜಿಮ್‌ ನಿರ್ಮಿಸುವಾಗ ಸರ್ಕಾರ ಸಾಲು ಸಾಲು ಭರವಸೆಗಳನ್ನು ನೀಡಿತ್ತು. ಆದರೆ ಈಗ ಜಿಮ್‌ನಿಂದಲೂ ಹಣ ಮಾಡಲು ಶುರು ಮಾಡಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮಲ್ಟಿಜಿಮ್‌ನಲ್ಲಿ ಫಿಟ್ನೆಸ್‌ ವರ್ಕೌಟ್‌ ಮಾಡಬೇಕು ಎಂದರೆ, ತಿಂಗಳಿಗೆ .2000 ಶುಲ್ಕ ಪಾವತಿಸಬೇಕು. ಕ್ರೀಡಾಪಟುಗಳಿಗಾಗಿಯೇ ನಿರ್ಮಿಸಲಾದ ಜಿಮ್‌ನಲ್ಲಿ ಅವರಿಂದಲೇ ಶುಲ್ಕ ತೆಗೆದುಕೊಂಡು ಕ್ರೀಡಾ ಇಲಾಖೆ ವ್ಯಾಪಾರಕ್ಕಿಳಿದಿದೆ. ಪ್ರವೇಶ ಶುಲ್ಕ ದುಬಾರಿಯಾದ ಕಾರಣ, ಆರ್ಥಿಕವಾಗಿ ಬಲಿಷ್ಠರಲ್ಲದ ಕ್ರೀಡಾಪಟುಗಳು ಮಲ್ಟಿಜಿಮ್‌ನಿಂದ ದೂರವೇ ಉಳಿದಿದ್ದಾರೆ. ಹಣ ಇರುವ ಅಥ್ಲೀಟ್‌ಗಳು 2000 ರು. ಪಾವತಿಸಿ ಜಿಮ್‌ ಸೌಲಭ್ಯ ಬಳಸಿದರೆ, ಸಾರ್ವಜನಿಕರಿಗೂ ಈ ಜಿಮ್‌ ಮುಕ್ತಗೊಳಿಸಲಾಗಿದೆ.

ಮಲ್ಟಿಜಿಮ್‌ ಫೋಟೋ ಕ್ಲಿಕ್ಕಿಸಲು ಇಲ್ಲ ಅನುಮತಿ!
‘ಕನ್ನಡಪ್ರಭ’ ತನ್ನ ಓದುಗರಿಗೆ ಮಲ್ಟಿಜಿಮ್‌ ಹಾಗೂ ಹಳೆ ಜಿಮ್‌ ನಡುವಿನ ವ್ಯತ್ಯಾಸವನ್ನು ತೋರಿಸುವ ಸಲುವಾಗಿ, ಮಲ್ಟಿಜಿಮ್‌ನ ಚಿತ್ರಗಳನ್ನು ಕ್ಲಿಕ್ಕಿಸಲು ಮುಂದಾದಾಗ ಅನುಮತಿ ನಿರಾಕರಿಸಲಾಯಿತು. ಇಲಾಖೆಯ ಆದೇಶದಂತೆ ಫೋಟೋ ತೆಗೆಯಬಾರದು ಎಂದು ತಾಕೀತು ಮಾಡಲಾಯಿತು.

ಹಾಳಾದ ಜಿಮ್‌ನಲ್ಲಿ ಅಭ್ಯಾಸ
ಕಂಠೀರವ ಕ್ರೀಡಾಂಗಣದ 200 ಮೀ. ಟ್ರ್ಯಾಕ್‌ (ಗೇಟ್‌ ನಂ.6) ಬಳಿ ಇರುವ ಹಳೆ, ದನದ ಕೊಟ್ಟಿಗೆಯಂತಿರುವ ಜಿಮ್‌ನಲ್ಲಿ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಜಿಮ್‌ನಲ್ಲಿ ಒಂದು ಅವಧಿಗೆ 20 ರಿಂದ 25 ಕ್ರೀಡಾಪಟುಗಳು ಮಾತ್ರ ಅಭ್ಯಾಸ ಮಾಡಬಹುದಾಗಿದೆ. ಪ್ರತಿ ದಿನ 150 ರಿಂದ 200 ಮಂದಿ ತಮ್ಮ ಫಿಟ್ನೆಸ್‌ಗಾಗಿ ಈ ಜಿಮ್‌ ಅನ್ನೇ ನೆಚ್ಚಿಕೊಂಡಿದ್ದಾರೆ. ತಮ್ಮ ಸರದಿಗಾಗಿ ಕಾಯ್ದು ಕಾಯ್ದು ಕ್ರೀಡಾಪಟುಗಳು ಹೈರಾಣಾಗಿದ್ದಾರೆ.

ಶಿಥಿಲವಾಗಿದೆ ಜಿಮ್‌ ಕಟ್ಟಡ
ಹಳೆ ಜಿಮ್‌ ಕಟ್ಟದ ಶಿಥಿಲಗೊಂಡಿದೆ. ಆದರೂ ಭವಿಷ್ಯದ ಅಥ್ಲೀಟ್‌ಗಳು ಅಲ್ಲಿಯೇ ಅಭ್ಯಾಸ ನಡೆಸುತ್ತಾರೆ. ಜಿಮ್‌ ಪ್ಲೇಟ್‌ಗಳ ರಬ್ಬರ್‌ ಕಿತ್ತು ಹೋಗಿದೆ. ಕೊಠಡಿ ಅಲ್ಲಲ್ಲಿ ಗುಂಡಿ ಬಿದ್ದಿದ್ದು, ನೆಲಹಾಸು ಕಿತ್ತು ಹೋಗಿದೆ. ವೇಟ್‌ ಲಿಫ್ಟಿಂಗ್‌ನ ಬಾರ್‌ಗಳು ತುಕ್ಕು ಹಿಡಿದಿವೆ. ರನ್ನಿಂಗ್‌ ಮಷಿನ್‌ಗಳು ಧೂಳು ಹಿಡಿದಿದ್ದರೆ, ಎಲ್ಲಂದರಲ್ಲಿ ಕಬ್ಬಿಣದ ಕಂಬಿಗಳನ್ನು ಬಿಸಾಡಲಾಗಿದೆ.

ಈ ಜಿಮ್‌ನಲ್ಲಿ ಅಥ್ಲೀಟ್‌ಗಳು, ಬಾಕ್ಸರ್‌ಗಳು, ಜಾವೆಲಿನ್‌ ಥ್ರೋ ಪಟುಗಳು, ಪವರ್‌ ಲಿಫ್ಟ​ರ್‍ಸ್, ವೇಟ್‌ಲಿಫ್ಟ​ರ್‍ಸ್, ಕುಸ್ತಿ ಪಟುಗಳು ಸೇರಿದಂತೆ ಇತರೆ ಕ್ರೀಡಾಪಟುಗಳು ಪ್ರತಿ ದಿನ ಬೆವರು ಹರಿಸುತ್ತಾರೆ. ವಾರದ 7 ದಿನವೂ ಈ ಜಿಮ್‌ಗೆ ಬಿಡುವೇ ಇಲ್ಲ.

ಮಲ್ಟಿಜಿಮ್‌ನಲ್ಲಿ ಅಥ್ಲೀಟ್‌ಗಳಿಗೆ ಪ್ರವೇಶವಿಲ್ಲ. ಹಳೆಯ ಜಿಮ್‌ನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸಾಕಷ್ಟುಬಾರಿ ಕ್ರೀಡಾ ಇಲಾಖೆಗೆ ಮನವಿ ಮಾಡಲಾಗಿದೆ. ಆದರೂ ಇಲ್ಲಿಯವರೆಗೂ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕ್ರೀಡಾಪಟುಗಳ ಸ್ಥಿತಿ ನೋಡಿದರೆ ಬೇಸರವಾಗುತ್ತದೆ.
- ರಮೇಶ್‌, ಅಥ್ಲೆಟಿಕ್ಸ್‌ ಕೋಚ್‌

ಕಳೆದ 5-6 ವರ್ಷಗಳಿಂದ ಕ್ರೀಡೆಯಲ್ಲಿ ತೊಡಗಿದ್ದೇನೆ. ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾಯ್ದುಕೊಳ್ಳುವುದು ಮುಖ್ಯ. ಹಣ ಕೊಟ್ಟು ಮಲ್ಟಿಜಿಮ್‌ಗೆ ಹೋಗಲು ಸಾಧ್ಯವಿಲ್ಲ. ಹಳೆ ಜಿಮ್‌ನಲ್ಲೇ ಸೌಲಭ್ಯ ನೀಡಿದರೆ ಅನುಕೂಲವಾಗುತ್ತದೆ. ಎಂದು ಹೆಸರು ಹೇಳಲು ಇಚ್ಚಿಸಿದ ಕ್ರೀಡಾಪಟು ಸುವರ್ಣನ್ಯೂಸ್.ಕಾಂಗೆ ಮಾಹಿತಿ ನೀಡಿದ್ದಾರೆ.
 

ಧನಂಜಯ ಎಸ್‌.ಹಕಾರಿ

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios