ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಡೋಪಿಂಗ್ ಪ್ರಕರಣಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಹೊಸ ತಿದ್ದುಪಡಿಯ ಪ್ರಕಾರ, ನಿಷೇಧಿತ ಮದ್ದು ಸೇವಿಸಿದ ಅಥ್ಲೀಟ್‌ಗಳು, ಪೂರೈಕೆದಾರರು ಮತ್ತು ಕೋಚ್‌ಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅಥ್ಲೀಟ್‌ಗಳ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಡೋಪಿಂಗ್ ವಿರುದ್ಧ ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಜೈಲು ಶಿಕ್ಷೆ, ದಂಡ ಸೇರಿದಂತೆ ನಿಯಮಗಳಲ್ಲಿ ತಿದ್ದುಪಡಿ ತರಲು ನಿರ್ಧರಿಸಿದ್ದು, ಮುಂದಿನ ಸಂಸತ್ ಅಧಿವೇಶನದಲ್ಲಿ ಬಿಲ್ ಮಂಡಿಸಲು ಮುಂದಾಗಿದೆ.

ನಿಷೇಧಿತ ಪದಾರ್ಧ ಸೇವಿಸಿದ ಅಥ್ಲೀಟ್‌ಗಳು ಮಾತ್ರವಲ್ಲದೆ ಅದನ್ನು ಪೂರೈಸುವವರು, ಕೋಚ್, ಸಹ ಅಥ್ಲೀಟ್‌ಗೆ 5 ವರ್ಷ ಜೈಲು ಶಿಕ್ಷೆ, 2 ಲಕ್ಷ ರು. ದಂಡ ವಿಧಿಸಲು ಮುಂದಾಗಿದೆ. ಇನ್ನು ಸರ್ಕಾರ ತರಲಿರುವ ತಿದ್ದುಪಡಿ ಬಗ್ಗೆ ಸಾರ್ವಜನಿಕ ಅಭಿಪ್ರಾಯಕ್ಕೆ ಮುಂದಾಗಿದ್ದು, ಜೂ.18ರ ತನಕ ಕಾಲವಕಾಶ ನೀಡಿದೆ. ಅದರ ಆಧಾರದಲ್ಲಿ ಮುಂದಿನ ಸಂಸತ್ ಅಧಿವೇಶನದಲ್ಲಿ ಸರ್ಕಾರ ಬಿಲ್ ಮಂಡಿಸಲು ನಿರ್ಧರಿಸಿದೆ.
ಪರಿಶೀಲನೆ:
ಈಗಿರುವ ಕಾಯ್ದೆ ಪ್ರಕಾರ ಅಥ್ಲೀಟ್‌ಗಳ ಮೇಲೆ ಅನುಮಾನ ಬಂದರೆ ಸ್ಥಳ, ಅಲ್ಲಿನ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಬಹುದು ಎನ್ನುವ ನಿಯಮವಿದೆ. ಆದರೆ ಹೊಸ ನಿಯಮ ಪ್ರಕಾರ ಯಾವುದೇ ಅಥ್ಲೀಟ್‌ಗಳ ಸಂಶಯ ಬಂದರೆ ಅವರನ್ನು ಸಾರ್ವಜನಿಕ ಸ್ಥಳದಲ್ಲಿಯೇ ಪರಿಶೀಲನೆ ನಡೆಸುವ ಅಧಿಕಾರವನ್ನು ಸರ್ಕಾರ ನೀಡಲು ಮುಂದಾಗಿದೆ. ಇದರ ಜತೆಗೆ, ಅಗತ್ಯವಿದ್ದಲ್ಲಿ ಅವರನ್ನು 24 ಗಂಟೆ ವಶ ಪಡೆದುಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಿದೆ.
ಇಂದಿನಿಂದ ರಾಂಚಿಯಲ್ಲಿ ಫೆಡರೇಷನ್ ಕಪ್ ಅಥ್ಲೆಟಿಕ್ಸ್
ರಾಂಚಿ: 29ನೇ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟ ಶುಕ್ರವಾರ ರಾಂಚಿಯಲ್ಲಿ ಆರಂಭಗೊಳ್ಳಲಿದೆ. 4 ದಿನಗಳ ಕಾಲ ನಡೆಯಲಿರುವ ಕೂಟದಲ್ಲಿ ಭಾರತದ ಅಗ್ರ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇದು 2026ರ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಅಂಡರ್-23 ಚಾಂಪಿಯನ್‌ಶಿಪ್‌ನ ಆಯ್ಕೆ ಟ್ರಯಲ್ಸ್ ಆಗಿರಲಿದೆ. ಹೀಗಾಗಿ ಅಥ್ಲೀಟ್‌ಗಳು ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಸಚಿನ್ ಯಾದವ್, ಮುರಳಿ ಶ್ರೀಶಂಕರ್, ಅನಿಮೇಶ್ ಕುಜೂರ್, ತೇಜಸ್ವಿನ್ ಶಂಕರ್ ಸೇರಿ ಪ್ರಮುಖರು ಕಣದಲ್ಲಿದ್ದಾರೆ. ಆದರೆ ನೀರಜ್ ಚೋಪ್ರಾ, ಅವಿನಾಶ್ ಸಾಬ್ಳೆ ಸೇರಿ ಈ ಬಾರಿ ಕೂಟದಲ್ಲಿ ಸ್ಪರ್ಧಿಸುತ್ತಿಲ್ಲ.


