19ನೇ ಸೀಸನ್‌ ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಹೊರಬಿದ್ದಿದ್ದು, ಎಂ.ಎಸ್. ಧೋನಿ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮುಂದಿನ ಸೀಸನ್‌ನಲ್ಲಿ ಧೋನಿ ಆಡುತ್ತಾರೆಯೇ ಎಂಬ ಬಗ್ಗೆ ನಾಯಕ ಋತುರಾಜ್ ಗಾಯಕ್ವಾಡ್ ಅಸ್ಪಷ್ಟ ಸುಳಿವು ನೀಡಿದ್ದು, ತಂಡದ ಕಳಪೆ ಪ್ರದರ್ಶನಕ್ಕೆ ಕಾರಣಗಳನ್ನು ವಿವರಿಸಿದ್ದಾರೆ.

ಚೆನ್ನೈ: 19ನೇ ಸೀಸನ್‌ ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಹೊರಬಿದ್ದ ಬೆನ್ನಲ್ಲೇ, ಎಂ.ಎಸ್. ಧೋನಿ ಅವರ ನಿವೃತ್ತಿ ಬಗ್ಗೆ ಅಭಿಮಾನಿಗಳಲ್ಲಿ ಮೂಡಿದ್ದ ಕುತೂಹಲಕ್ಕೆ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ನಡೆದ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 89 ರನ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಸಿಎಸ್‌ಕೆ ತಂಡದ ಪ್ಲೇಆಫ್ ಕನಸು ಭಗ್ನಗೊಂಡಿತು.

ಐಪಿಎಲ್ ಇತಿಹಾಸದ 19 ಸೀಸನ್‌ಗಳಲ್ಲಿ ಇದೇ ಮೊದಲ ಬಾರಿಗೆ ಎಂ.ಎಸ್. ಧೋನಿ ಒಂದೇ ಒಂದು ಪಂದ್ಯವನ್ನೂ ಆಡದೆ ಇಡೀ ಸೀಸನ್‌ನಿಂದ ಹೊರಗುಳಿದಿದ್ದಾರೆ. ಧೋನಿ ಅನುಪಸ್ಥಿತಿ ತಂಡದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಋತುರಾಜ್ ಗಾಯಕ್ವಾಡ್ ಒಪ್ಪಿಕೊಂಡರು. ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮುಂದಿನ ಸೀಸನ್‌ನಲ್ಲಿ ಧೋನಿ ವಾಪಸ್ ಬರುತ್ತಾರಾ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಸುಳಿವು ನೀಡಿದರು.

ಧೋನಿ ಮುಂದಿನ ಸೀಸನ್ ಐಪಿಎಲ್ ಆಡ್ತಾರಾ?

"ಮುಂದಿನ ಸೀಸನ್‌ನಲ್ಲಿ ಧೋನಿ ಆಡುತ್ತಾರಾ ಅನ್ನೋದು ಮುಂದಿನ ವರ್ಷವೇ ಗೊತ್ತಾಗುತ್ತೆ. ನನಗೂ ಕೂಡ ಆಗಲೇ ತಿಳಿಯೋದು. ಸದ್ಯಕ್ಕೆ ಈ ಬಗ್ಗೆ ಏನೂ ಹೇಳೋಕೆ ಆಗಲ್ಲ," ಎಂದು ಋತುರಾಜ್ ಉತ್ತರಿಸಿದರು. "ಕ್ರೀಸ್‌ನಲ್ಲಿ ಧೋನಿ ಸೃಷ್ಟಿಸುತ್ತಿದ್ದ ಇಂಪ್ಯಾಕ್ಟ್ ಈ ಸೀಸನ್‌ನಲ್ಲಿ ತಂಡಕ್ಕೆ ದೊಡ್ಡ ನಷ್ಟವಾಗಿತ್ತು. ಅವರ ಅನುಪಸ್ಥಿತಿ ನಮಗೆ ದೊಡ್ಡ ಹಿನ್ನಡೆಯೇ ಸರಿ. ಕೊನೆಯ ಓವರ್‌ಗಳಲ್ಲಿ ಎದುರಾಳಿಗಳಲ್ಲಿ ಭಯ ಹುಟ್ಟಿಸಿ, ಒಬ್ಬರೇ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಈ ಸೀಸನ್‌ನಲ್ಲಿ ನಾವು ಅವರನ್ನು ಬಹಳ ಮಿಸ್ ಮಾಡಿಕೊಂಡಿದ್ದೇವೆ. ಮುಂದಿನ ಸೀಸನ್‌ನಲ್ಲಿ ಏನಾಗುತ್ತೆ ಅಂತ ಊಹಿಸಲು ಸಾಧ್ಯವಿಲ್ಲ," ಎಂದು ಋತುರಾಜ್ ಹೇಳಿದರು.

ತಂಡದ ಕಳಪೆ ಪ್ರದರ್ಶನದ ಹಿಂದಿನ ಕಾರಣಗಳನ್ನೂ ಗಾಯಕ್ವಾಡ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜೇಮಿ ಓವರ್‌ಟನ್ ಮತ್ತು ಆಲ್‌ರೌಂಡರ್ ರಾಮಕೃಷ್ಣ ಘೋಷ್ ಅವರ ಗಾಯದ ಸಮಸ್ಯೆಗಳು ತಂಡದ ಪ್ಲೇಯಿಂಗ್ XI ಸಂಯೋಜನೆಯನ್ನು ಹಾಳುಮಾಡಿದವು. ಕೊನೆಯ ಮೂರು ಪಂದ್ಯಗಳಲ್ಲಿ ಸರಿಯಾದ ಬ್ಯಾಟರ್ ಅಥವಾ ಬೌಲರ್ ಇಲ್ಲದೆ ತಂಡವು ಕಣಕ್ಕಿಳಿಯಬೇಕಾಯಿತು ಎಂದು ಅವರು ವಿವರಿಸಿದರು.

"ಸಿಎಸ್‌ಕೆ ಸದ್ಯ ದೊಡ್ಡ ಬದಲಾವಣೆಯ ಹಂತದಲ್ಲಿದೆ. ತಂಡದ 8 ರಿಂದ 10 ಆಟಗಾರರು 20ಕ್ಕಿಂತ ಕಡಿಮೆ ಐಪಿಎಲ್ ಪಂದ್ಯಗಳ ಅನುಭವ ಹೊಂದಿದವರಾಗಿದ್ದಾರೆ. ನಾವು ಯುವ ತಂಡದೊಂದಿಗೆ ಆಡುತ್ತಿದ್ದೇವೆ ಎಂಬುದನ್ನು ಹೊರಗಿನವರು ಬೇಗ ಒಪ್ಪುವುದಿಲ್ಲ. ಆದರೂ, ಈ ಟೂರ್ನಮೆಂಟ್ ಯುವ ಆಟಗಾರರಿಗೆ ಉತ್ತಮ ಅನುಭವವನ್ನು ನೀಡಿದೆ. ನಮಗೆ ಎಲ್ಲಿ ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳಲು ಈ ಸೀಸನ್ ಸಹಾಯ ಮಾಡಿದೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಆರು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾದ ಬಗ್ಗೆ ಈ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ," ಎಂದು ಋತುರಾಜ್ ಗಾಯಕ್ವಾಡ್ ಸ್ಪಷ್ಟಪಡಿಸಿದರು.

7ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ ಸಿಎಸ್‌ಕೆ:

19ನೇ ಸೀಸನ್‌ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತಂಡವು ಇದೀಗ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನೊಂದಿಗೆ ಅಭಿಯಾನ ಮುಗಿಸಿದೆ. ಐಪಿಎಲ್‌ನಲ್ಲಿ ದೊಡ್ಡ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಸಿಎಸ್‌ಕೆ, 14 ಪಂದ್ಯಗಳಲ್ಲಿ 6 ಗೆಲುವು ಮತ್ತು 8 ಸೋಲುಗಳನ್ನು ಕಾಣುವ ಮೂಲಕ ಏಳನೇ ಸ್ಥಾನದೊಂದಿಗೆ ಟೂರ್ನಿಗೆ ಗುಡ್‌ ಬೈ ಹೇಳಿದೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಈ ಸೀಸನ್‌ನಲ್ಲಿ ಅನುಭವಿಸಿದ ಎಡವಟ್ಟುಗಳನ್ನು ತಿದ್ದಿಕೊಂಡು ಮುಂದಿನ ವರ್ಷ ಭರ್ಜರಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.