PV ಸಿಂಧು ಕೋಚ್ ರಾಜೀನಾಮೆ..!
ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕೋಚ್ ದಿಢೀರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಕೂಟಕ್ಕೆ ಕೇವಲ ಇನ್ನೊಂದು ವರ್ಷ ಇರುವಾಗಲೇ ರಾಜೀನಾಮೆ ನೀಡಿರುವುದು ಭಾರತಕ್ಕೆ ಅಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನವದೆಹಲಿ[ಸೆ.25]: ಭಾರತ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಕೋಚ್ ದಕ್ಷಿಣ ಕೊರಿಯಾದ ಕಿಮ್ ಜಿ ಹ್ಯೂನ್ ವೈಯಕ್ತಿಕ ಕಾರಣಗಳಿಂದ ಹುದ್ದೆ ತ್ಯಜಿಸಿದ್ದಾರೆ. ಇತ್ತೀ ಚೆಗೆ ಪಿ.ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆಲುವಿನಲ್ಲಿ ಕಿಮ್ ಪ್ರಮುಖ ಪಾತ್ರವಹಿಸಿದ್ದರು.
2020ರ ಟೋಕಿಯೋ ಒಲಿಂಪಿಕ್ಸ್ ಗೆ ಇನ್ನೊಂದೇ ವರ್ಷ ಉಳಿದಿದ್ದು, ಅವರ ಅನುಪಸ್ಥಿತಿ ಭಾರತೀಯ ಶಟ್ಲರ್ ಗಳನ್ನು ಕಾಡಲಿದೆ. ‘ವಿಶ್ವ ಚಾಂಪಿಯನ್‌ಶಿಪ್ ವೇಳೆ ಕಿಮ್ ಪತಿಗೆ ನರ ಪಾರ್ಶ್ವವಾಯು ಆಗಿದ್ದು, ಗುಣಮುಖರಾಗಲು 4ರಿಂದ 6 ತಿಂಗಳು ಅಗತ್ಯವಿದೆ. ಇದರಿಂದ ಕಿಮ್ ಹುದ್ದೆ ತ್ಯಜಿಸಿದ್ದಾರೆ’ ಎಂದು ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ತಿಳಿಸಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್: ಚಿನ್ನ ಗೆದ್ದು ಇತಿಹಾಸ ಬರೆದ PV ಸಿಂಧು
ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ[BAI] 2019ರ ಆರಂಭದಲ್ಲೇ ದಕ್ಷಿಣ ಕೊರಿಯಾದ ಕಿಮ್ ಜಿ ಹ್ಯೂನ್ ರನ್ನು ಬ್ಯಾಡ್ಮಿಂಟನ್ ಸಿಂಗಲ್ಸ್ ಕೋಚ್ ಆಗಿ ನೇಮಕ ಮಾಡಿಕೊಂಡಿತ್ತು. ಸಿಂಧು ಜತೆ ಉತ್ತಮ ಒಡನಾಟ ಹೊಂದಿದ್ದ ಕಿಮ್ ಜಿ ಹ್ಯೂನ್ ಕಳೆದ ತಿಂಗಳಷ್ಟೇ ಸ್ವಿಟ್ಜರ್’ಲ್ಯಾಂಡ್’ನ ಬಾಸೆಲ್’ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸಿಂಧು ಚಿನ್ನ ಗೆಲ್ಲುವಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದರು.
ದಸರಾ ಕ್ರೀಡಾಕೂಟ ಉದ್ಘಾಟಿಸಲಿರುವ ಪಿ.ವಿ.ಸಿಂಧು
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕೂಟದಲ್ಲಿ ಪಿ.ವಿ ಸಿಂಧು ಜಪಾನಿನ ನಜೋಮಿ ಒಕೊಹರ ಮಣಿಸಿ ಮೊದಲ ಬಾರಿಗೆ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದರು. ಇದರೊಂದಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕೂಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಶಟ್ಲರ್ ಎನ್ನುವ ಗೌರವಕ್ಕೂ ಸಿಂಧು ಭಾಜನರಾಗಿದ್ದರು.