ಡೈಮಂಡ್‌ ಲೀಗ್ ಫೈನಲ್‌ನಲ್ಲಿ ಚಿನ್ನದ ಪದಕ ಜಯಿಸಿದ ನೀರಜ್ ಚೋಪ್ರಾಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾಡೈಮಂಡ್‌ ಲೀಗ್ ಫೈನಲ್‌ನಲ್ಲಿ ನೀರಜ್ ಚೋಪ್ರಾ 88.44 ಮೀಟರ್ ದೂರ ಜಾವೆಲಿನ್ ಎಸೆತ

ಝ್ಯುರಿಚ್‌(ಸೆ.10): ಒಲಿಂಪಿಕ್ಸ್‌ ಚಿನ್ನ ವಿಜೇತ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರತಿಷ್ಠಿತ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಪ್ರಶಸ್ತಿ ಜಯಿಸುವ ಮೂಲಕ, ಈ ಸಾಧನೆಗೈದ ಮೊದಲ ಭಾರತೀಯ ಅಥ್ಲೀಟ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ನೀರಜ್‌ 88.44 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಮೊದಲ ಸ್ಥಾನ ಪಡೆದರು. ಇದು ಅವರ ವೃತ್ತಿಬದುಕಿನ 4ನೇ ಶ್ರೇಷ್ಠ ಪ್ರದರ್ಶನ. ಒಟ್ಟು 6 ಪ್ರಯತ್ನಗಳ ಪೈಕಿ ಮೊದಲ ಯತ್ನದಲ್ಲಿ ಪೌಲ್‌ ಮಾಡಿದ ನೀರಜ್‌, 2ನೇ ಎಸೆತದಲ್ಲಿ 88.44 ಮೀ. ಎಸೆದು ಮೊದಲ ಸ್ಥಾನಕ್ಕೇರಿದರು. ಬಳಿಕ ಕ್ರಮವಾಗಿ 88.00 ಮೀ., 86.11 ಮೀ., 87.00 ಮೀ. ಮತ್ತು 83.60 ಮೀ. ಎಸೆದರು.

ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಚೆಕ್‌ ಗಣರಾಜ್ಯದ ಜಾಕುಬ್‌ ವಡ್ಲೆಜ್‌ 86.94 ಮೀ.ನೊಂದಿಗೆ 2ನೇ ಸ್ಥಾನ ಪಡೆದರೆ, ಜರ್ಮನಿಯ ಜೂಲಿಯನ್‌ ವೆಬರ್‌ 83.73 ಮೀ. ಎಸೆದು 3ನೇ ಸ್ಥಾನ ಗಳಿಸಿದರು. ನೀರಜ್‌ಗೆ 30000 ಅಮೆರಿಕನ್‌ ಡಾಲರ್‌(ಅಂದಾಜು 23.87 ಲಕ್ಷ ರು.) ಬಹುಮಾನ, ಟ್ರೋಫಿ ದೊರೆಯಿತು.

ನೀರಜ್‌ ಚೋಪ್ರಾ ಕಳೆದ 13 ತಿಂಗಳಲ್ಲಿ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. 2021ರ ಆಗಸ್ಟ್‌ 7ರಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ನೀರಜ್‌, ಕಳೆದ ತಿಂಗಳು ಅಮೆರಿಕದ ಯೂಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ಶಿಪ್‌ ಬಳಿಕ ಅತಿಹೆಚ್ಚು ಮಹತ್ವ ಪಡೆದಿರುವ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

Neeraj Chopra: ಡೈಮಂಡ್ ಲೀಗ್‌ ಟ್ರೋಫಿ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ..!

ಪೋಷಕರ ಎದುರು ಮಹಾ ಸಾಧನೆ!

ನೀರಜ್‌ರ ಡೈಮಂಡ್‌ ಲೀಗ್‌ ಫೈನಲ್ಸ್‌ ಸಾಧನೆಯ ಮತ್ತೊಂದು ವಿಶೇಷ ಎಂದರೆ ಅವರ ಪೋಷಕರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಇದೇ ಮೊದಲ ಬಾರಿಗೆ ನೀರಜ್‌ರ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಅವರ ತಂದೆ-ತಾಯಿ ಕ್ರೀಡಾಂಗಣದಲ್ಲಿ ಕೂತು ವೀಕ್ಷಿಸಿದ್ದು. ಚಿನ್ನದ ಪದಕ ಗೆದ್ದ ಸಂಭ್ರಮವನ್ನು ಕುಟುಂಬದೊಂದಿಗೆ ಪ್ಯಾರಿಸ್‌ನಲ್ಲಿ ಆಚರಿಸುವುದಾಗಿ ನೀರಜ್‌ ಹೇಳಿಕೊಂಡಿದ್ದಾರೆ.

Scroll to load tweet…

90 ಮೀ. ನಿರೀಕ್ಷಿಸಿದ್ದೆ, ಆದರೂ ಸಮಾಧಾನವಿದೆ

ಜಾಕುಬ್‌ರಿಂದ ಉತ್ತಮ ಪೈಪೋಟಿ ಎದುರಾಯಿತು. 90 ಮೀ. ದೂರಕ್ಕೆ ಜಾವೆಲಿನ್‌ ಎಸೆಯುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಪರವಾಗಿಲ್ಲ, ನನ್ನ ಬಳಿಕ ಈಗ ಡೈಮಂಡ್‌ ಟ್ರೋಫಿ ಇದೆ. ಗೆಲ್ಲುವುದು ನನಗೆ ಬಹಳ ಮುಖ್ಯವಾಗಿತ್ತು. 2-3 ವಾರ ವಿಶ್ರಾಂತಿ ಬೇಕಿದೆ. ಆ ನಂತರ ಮುಂದಿನ ವರ್ಷಕ್ಕೆ ಅಭ್ಯಾಸ ಆರಂಭಿಸಲಿದ್ದೇನೆ. - ನೀರಜ್‌ ಚೋಪ್ರಾ

ನೀರಜ್‌ಗೆ ಪ್ರಧಾನಿ ಮೋದಿ ಅಭಿನಂದನೆ

Scroll to load tweet…

ನವದೆಹಲಿ: ನೀರಜ್‌ರ ಸಾಧನೆಯನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಟ್ವೀಟರ್‌ನಲ್ಲಿ ಖುಷಿ ಹಂಚಿಕೊಂಡಿರುವ ಮೋದಿ, ‘ಸ್ಥಿರತೆ ಹಾಗೂ ಬದ್ಧತೆಗೆ ದೊರೆತಿರುವ ಯಶಸ್ಸು ಇದು. ಅಥ್ಲೆಟಿಕ್ಸ್‌ನಲ್ಲಿ ಭಾರತ ದಾಪುಗಾಲಿಡುತ್ತಿದೆ ಎನ್ನುವುದಕ್ಕೇ ನೀರಜ್‌ರ ಪ್ರದರ್ಶನವೇ ಸಾಕ್ಷಿ’ ಎಂದಿದ್ದಾರೆ. ನೂರಾರು ಗಣ್ಯರು ನೀರಜ್‌ಗೆ ಸಾಮಾಜಿಕ ತಾಣಗಳಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.