Neeraj Chopra: ಡೈಮಂಡ್ ಲೀಗ್ ಟ್ರೋಫಿ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ..!
ಡೈಮಂಡ್ ಲೀಗ್ ಟ್ರೋಫಿ ಗೆದ್ದ ನೀರಜ್ ಚೋಪ್ರಾ
ಡೈಮಂಡ್ ಲೀಗ್ ಟ್ರೋಫಿ ಗೆದ್ದ ಮೊದಲ ಭಾರತೀಯ ನೀರಜ್ ಚೋಪ್ರಾ
ಡೈಮಂಡ್ ಲೀಗ್ ಫೈನಲ್‌ನಲ್ಲಿ 88.44 ಮೀಟರ್ ದೂರ ಎಸೆದ ಚಿನ್ನದ ಹುಡುಗ
ಜೂರಿಚ್(ಸೆ.09): ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್, ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಜೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ 88.44 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಡೈಮಂಡ್ ಲೀಗ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಜಾವೆಲಿನ್ ಪಟು ಎನ್ನುವ ಕೀರ್ತಿಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.
ಕಳೆದ ಜುಲೈ 26ರಂದು ಲಾಸನ್ನೆಯಲ್ಲಿ ನಡೆದ ಡೈಮಂಡ್ ಲೀಗ್ ಟೂರ್ನಿಯಲ್ಲಿ ನೀರಜ್ ಚೋಪ್ರಾ 89.08 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಇದೀಗ 24 ವರ್ಷದ ನೀರಜ್ ಚೋಪ್ರಾ ಡೈಮಂಡ್ ಲೀಗ್ ಫೈನಲ್‌ನ ಎರಡನೇ ಪ್ರಯತ್ನದಲ್ಲೇ 88.44 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಡೈಮಂಡ್ ಲೀಗ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀರಜ್ ಚೋಪ್ರಾ, ಡೈಮಂಡ್ ಲೀಗ್ ಫೈನಲ್‌ನಲ್ಲಿ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಜೆಕ್ ಹಾಗೂ ಜರ್ಮನಿಯ ಜೂಲಿಯನ್ ವೇಬರ್ ಅವರನ್ನು ಹಿಂದಿಕ್ಕಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿ ಪೌಲ್ ಮಾಡಿದರು. ಇನ್ನು ಜೇಕಬ್ ವಾಡ್ಲೆಜೆಕ್ ಮೊದಲ ಪ್ರಯತ್ನದಲ್ಲಿ 84.15 ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು. ಆದರೆ ನೀರಜ್ ಚೋಪ್ರಾ, ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ದೂರ ಎಸೆಯುವ ಮೂಲಕ ಡೈಮಂಡ್ ಲೀಗ್ ಫೈನಲ್‌ನಲ್ಲಿ ತಮ್ಮ ಗೆಲುವನ್ನು ಖಚಿತಪಡಿಸಿಕೊಂಡರು. ಇದಾದ ಬಳಿಕ ಯಾವೊಬ್ಬ ಜಾವೆಲಿನ್ ಥ್ರೋ ಪಟು ಕೂಡಾ ನೀರಜ್ ಅವರನ್ನು ಮೀರಿಸಲು ಸಾಧ್ಯವಾಗಲಿಲ್ಲ.
1.5 ಕೋಟಿ ಕೊಟ್ಟು ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ್ದ ಬಿಸಿಸಿಐ..!
ಇನ್ನುಳಿದಂತೆ ನೀರಜ್ ಚೋಪ್ರಾ, ಮೂರನೇ ಪ್ರಯತ್ನದಲ್ಲಿ 88.00 ಮೀಟರ್, ನಾಲ್ಕನೇ ಪ್ರಯತ್ನದಲ್ಲಿ 86.11 ಮೀಟರ್, ಐದನೇ ಪ್ರಯತ್ನದಲ್ಲಿ 87.00 ಮೀಟರ್ ಹಾಗೂ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 86.94 ಮೀಟರ್ ದೂರ ಜಾವೆಲಿನ್ ಎಸೆದರು. ಇನ್ನು ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಜೆಕ್ 86.94 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ನೀರಜ್ ಚೋಪ್ರಾ ಅವರ ಈ ಸಾಧನೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಾಮಾಜಿಕ ಜಾಲತಾಣವಾದ 'ಕೂ' ಮೂಲಕ ಶುಭ ಕೋರಿದ್ದಾರೆ.
ನೀರಜ್ ಚೋಪ್ರಾ ಈ ಮೊದಲು 2017ರಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ 7ನೇ ಸ್ಥಾನ ಹಾಗೂ 2018ರಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ ಕೆಲವೇ ಇಂಚುಗಳ ಅಂತರದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಡೈಮಂಡ್ ಲೀಗ್ ಟೂರ್ನಿ?
ಇದು ಪ್ರತಿಷ್ಠಿತ ಜಾವೆಲಿನ್ ಥ್ರೋ ಟೂರ್ನಿಗಳಲ್ಲಿ ಒಂದು ಎನಿಸಿದ್ದು, ಇದು ಸ್ಟಾಕ್‌ಹೋಮ್‌ನಲ್ಲಿ ಕಳೆದ ಜೂನ್ 30ರಂದು ಆರಂಭವಾಗಿತ್ತು. 2022ರಲ್ಲಿ ಒಟ್ಟು 13 ಡೈಮಂಡ್ ಲೀಗ್ ಟೂರ್ನಿಗಳು ನಡೆಯಲಿದ್ದು, ಈ ಪೈಕಿ 5 ಟೂರ್ನಿಗಳು ಪುರುಷರ ಜಾವೆಲಿನ್ ಥ್ರೋಗೆ ಸಂಬಂಧಿಸಿದವುಗಳಾಗಿವೆ. ಈಗಾಗಲೇ ಮೇ ತಿಂಗಳಿನಲ್ಲಿ ದೋಹಾದಲ್ಲಿ ಮೊದಲ ಡೈಮಂಡ್ ಲೀಗ್ ನಡೆದಿತ್ತು, ಇದಾದ ಬಳಿಕ ಸ್ಟಾಕೋಹೋಮ್, ಸಿಲಿಸಿಯಾ, ಮೊನ್ಯಾಕೊ ಹಾಗೂ ಲಾಸನ್ನೆಯಲ್ಲಿ ಇನ್ನುಳಿದ ನಾಲ್ಕು ಡೈಮಂಡ್ ಲೀಗ್‌ಗಳು ನಡೆದವು. ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಅಗ್ರ 6 ಜಾವೆಲಿನ್ ಥ್ರೋ ಪಟುಗಳು ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇದೀಗ ಡೈಮಂಡ್ ಲೀಗ್ ಟ್ರೋಫಿ ನೀರಜ್ ಚೋಪ್ರಾ ಪಾಲಾಗಿದೆ.