ಶಿಸ್ತುಬದ್ಧ ದಾಳಿ ನಡೆಸಿದ ಹರ್ಮನ್‌ಪ್ರೀತ್ ಕೌರ್ ಪಡೆ 104 ರನ್'ಗಳಿಗೆ ಪಾಕಿಸ್ತಾನ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಬ್ಯಾಂಕಾಕ್(ಡಿ.04): ಮಿಥಾಲಿ ರಾಜ್ ಅವರ ಆಕರ್ಷಕ ಬ್ಯಾಟಿಂಗ್ ಹಾಗೂ ಜೂಲಾನ್ ಗೋಸ್ವಾಮಿ, ಏಕ್ತಾ ಬಿಶ್ತಾ ಅವರ ಕರಾರುವಕ್ಕಾದ ದಾಳಿಗೆ ನಲುಗಿದ ಪಾಕಿಸ್ತಾನ ವನಿತೆಯರ ತಂಡ ಟೀಂ ಇಂಡಿಯಾ ಎದುರು ತಲೆಬಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಮತ್ತೊಮ್ಮೆ ಫೈನಲ್'ನಲ್ಲಿ ಪಾಕ್ ತಂಡವನ್ನು ಮಣಿಸುವ ಮೂಲಕ ಅರ್ಹವಾಗಿಯೇ ಏಷ್ಯಾ ಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಇಲ್ಲಿನ ಏಷ್ಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆರಿಸಿಕೊಂಡಿತು. ಆದರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಕೆಟ್ಟ ಹೊಡೆತಕ್ಕೆ ಕೈ ಹಾಕಿ 6 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಮಾಜಿ ನಾಯಕಿ ಮಿಥಾಲಿ ರಾಜ್ ಗಟ್ಟಿಯಾಗಿ ನಿಂತು ರನ್ ಕಲೆಹಾಕುತ್ತಾ ಸಾಗಿದರು. ಅಂತಿಮವಾಗಿ ಮಿಥಾಲಿ 73 ರನ್'ಗಳಿಸಿ ಅಜೇಯರಾಗುಳಿದರು. ಇನ್ನು ಕೆಳ ಕ್ರಮಾಂಕದಲ್ಲಿ ಅಬ್ಬರಿಸಿದ ಜೂಲನ್ ಗೋಸ್ವಾಮಿ 10 ಎಸೆತಗಳಲ್ಲಿ 17 ರನ್ ಗಳಿಸಿ ಮಿಂಚಿದರು. ಅವರ ಈ ಆಕರ್ಷಕ ಇನಿಂಗ್ಸ್'ನಲ್ಲಿ ಎರಡು ಭರ್ಜರಿ ಸಿಕ್ಸರ್'ಗಳೂ ಸೇರಿದ್ದವು. ಅಂತಿಮವಾಗಿ ಮಹಿಳೆಯರ ತಂಡ 20 ಓವರ್'ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್'ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಸಂಘಟಿತ ದಾಳಿ

ಜಯದ ಗುರಿಯನ್ನು ಆತ್ಮವಿಶ್ವಾಸದಿಂದಲೇ ಎದುರಿಸಲು ಮುಂದಾದ ಪಾಕ್‌ಗೆ ಭಾರತದ ವೇಗಿ ಜೂಲನ್ ಗೋಸ್ವಾಮಿ ಮೊದಲ ಪೆಟ್ಟು ನೀಡಿದರು. ಆರಂಭಿಕ ಆಟಗಾರ್ತಿ ಆಯೇಷಾ ಜಾರ್ (15) ಅವರನ್ನು ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಬೌಲ್ಡ್ ಮಾಡಿದ ಗೋಸ್ವಾಮಿ, ಪಾಕ್ ಪತನಕ್ಕೆ ಮುನ್ನುಡಿ ಬರೆದರು. ಬಳಿಕ ಬಂದ ಅಸ್ಮಾವಿಯಾ ಇಕ್ಬಾಲ್ (1) ಮರು ಓವರ್ ನಲ್ಲಿ ಶಿಖಾ ಪಾಂಡೆಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು. ಹೀಗೆ ಕೇವಲ 24 ರನ್ ಗಳಿಸುವಷ್ಟರಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡ ಪಾಕ್, ಮತ್ತೆ ನಾಲ್ಕು ರನ್ ಕಲೆಹಾಕುವಲ್ಲಿಯೇ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಆನಂತರ ಬಂದ ನಾಯಕಿ ಬಿಸ್ಮಾಹ್ ಮರೂ (25: 26 ಎಸೆತ, 2 ಬೌಂಡರಿ) ಅವರನ್ನು ಕೂಡಿಕೊಂಡ ಎರಡನೇ ಕ್ರಮಾಂಕಿತ ಆಟಗಾರ್ತಿ ಜವೇರಿಯಾ ಖಾನ್ ಹೋರಾಟ ಮುಂದುವರೆಸಿದರು. ಆದರೆ, ಈ ಜೋಡಿಯನ್ನು ವೇಗಿ ಎಕ್ತಾ ಬಿಶ್ತ್ ಬೇರ್ಪಡಿಸಿದರು. 10ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಜವೇರಿಯಾ ಬಾರಿಸಿದ ಚೆಂಡನ್ನು ಕವರ್‌'ನಲ್ಲಿದ್ದ ಹರ್ಮನ್‌ಪ್ರೀತ್ ಕೌರ್ ಕ್ಯಾಚ್ ಪಡೆದು ಅವರ ಹೋರಾಟಕ್ಕೆ ತೆರೆ ಎಳೆದರು. ಜವೇರಿಯಾ 26 ಎಸೆತಗಳಲ್ಲಿ 2 ಬೌಂಡರಿ ಸೇರಿದ 22 ರನ್‌ಗಳಿಗೆ ನಿರುತ್ತರರಾದರು. ಜವೇರಿಯಾ ನಿರ್ಗಮಿಸುತ್ತಿದ್ದಂತೆಯೇ ನಾಯಕಿ ಬಿಸ್ಮಾಹ್, ಆಫ್'ಸ್ಪಿನ್ನರ್ ಅನುಜಾ ಪಾಟೀಲ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಕ್ರೀಸ್ ತೊರೆದರು. ಅಲ್ಲಿಂದಾಚೆಗೆ ತೀವ್ರ ಒತ್ತಡಕ್ಕೆ ಗುರಿಯಾದ ಪಾಕ್‌ಗೆ ದಿಟ್ಟತನದ ಜತೆಯಾಟ ಸಿಗಲಿಲ್ಲ. ನಿರ್ಣಾಯಕ ಘಟ್ಟದಲ್ಲಿ ನೈನ್ ಅಬ್ದಿದಿ (9) ಮತ್ತು ಇರಾಮ್ ಜಾವೇದ್ (3) ಎರಡಂಕಿ ದಾಟದೆ ಕೈಚೆಲ್ಲಿದ ಬಳಿಕ, ಒತ್ತಡದಿಂದ ಕೂಡಿದ್ದ ಕಡೇ ಘಟ್ಟದಲ್ಲಿ ನಿದಾ ದರ್ ಮತ್ತು ಸನಾ ಮಿರ್ ತಲಾ 12 ರನ್'ಗಳಿಸಲಷ್ಟೇ ಶಕ್ತರಾದರು.

. ನಂತರ ಶಿಸ್ತುಬದ್ಧ ದಾಳಿ ನಡೆಸಿದ ಹರ್ಮನ್‌ಪ್ರೀತ್ ಕೌರ್ ಪಡೆ 104 ರನ್'ಗಳಿಗೆ ಪಾಕಿಸ್ತಾನ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ವನಿತೆಯರ ಟೀಂ ಇಂಡಿಯಾ 17 ರನ್'ಗಳ ಅಂತರದಲ್ಲಿ ಜಯಭೇರಿ ಬಾರಿಸಿ ಏಷ್ಯಾದಲ್ಲಿ ನಾವೇ ಹುಲಿಗಳು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಸ್ಕೋರ್ ವಿವರ;

ಭಾರತ: 121/5

ಮಿಥಾಲಿ ರಾಜ್: 73

ಜೂಲನ್ ಗೋಸ್ವಾಮಿ: 17

ಪಾಕಿಸ್ತಾನ: 104/6

ಬಿಸ್ಮಾಹ್ ಮರೂ : 25

ಜವೇರಿಯಾ ಖಾನ್ : 22