ನೇಪಿಯರ್(ಜ.23): ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಮೋಡಿ ಮಾಡಿದರೆ, ಬ್ಯಾಟಿಂಗ್‌ನಲ್ಲಿ ಶಿಖರ್ ಧವನ್ ಅಬ್ಬರಿಸಿದರು. ಈ ಮೂಲಕ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ ಭರ್ಜರಿ ಗೆಲುವು ದಾಖಲಿಸಿತು. ಇಷ್ಟೇ ಅಲ್ಲ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ನ್ಯೂಜಿಲೆಂಡ್ ತಂಡವನ್ನ ಅಲ್ಪಮೊತ್ತಕ್ಕೆ ಆಲೌಂಟ್ ಮಾಡಿ 158 ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿತು. ಆದರೆ ರೋಹಿತ್ ಶರ್ಮಾ 11 ರನ್ ಸಿಡಿಸಿ ಔಟಾದರು. ಇನ್ನು ಕೊಹ್ಲಿ ಹಾಗೂ ಶಿಖರ್ ಧವನ್ ಬ್ಯಾಟಿಂಗ್ ಮುಂದುವರಿಸುತ್ತಿದ್ದಂತೆ ಬಿಸಿಲಿನಿಂದ ಪಂದ್ಯವನ್ನ ಸ್ಥಗಿತಗೊಳಿಸಲಾಯಿತು. 

ಇದನ್ನೂ ಓದಿ: ಕುಲ್ದೀಪ್–ಶಮಿ ಮ್ಯಾಜಿಕ್: ಅಲ್ಪ ಮೊತ್ತಕ್ಕೆ ಕಿವೀಸ್ ಆಲೌಟ್

ಕೆಲ ಕಾಲ ಪಂದ್ಯ ಸ್ಥಗಿತಗೊಂಡ  ಕಾರಣ ಒಂದು ಓವರ್ ಕಡಿತ ಮಾಡಿ ಭಾರತದ ಗೆಲುವಿಗೆ 156 ರನ್ ಟಾರ್ಗೆಟ್ ನೀಡಲಾಯಿತು. ಸುಲಭ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾಗೆ ಧವನ್ ಹಾಗೂ ಕೊಹ್ಲಿ ಬ್ಯಾಟಿಂಗ್ ನೆರವಾಯಿತು. ಶಿಖರ್ ಧವನ್ 26ನೇ ಏಕದಿನ ಅರ್ಧಶತಕ ದಾಖಲಿಸಿದರು.

ಗೆಲುವಿಗೆ 24 ರನ್ ಬೇಕಿದ್ದಾಗ ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಿತು. ಕೊಹ್ಲಿ 45 ರನ್ ಸಿಡಿಸಿ ಔಟಾದರು. ಧವನ್ ಹಾಗೂ ಅಂಬಾಟಿ ರಾಯುಡು ನೆರವಿನಿಂದ ಟೀಂ ಇಂಡಿಯಾ ಗೆಲುವಿನ ದಡ ಸೇರಿತು. 34.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಧವನ್ ಅಜೇಯ 75 ರನ್  ಸಿಡಿಸಿದರೆ, ರಾಯುಡು 13 ರನ್ ಸಿಡಿಸಿದರು. ಆಸಿಸ್ ಸರಣಿ ಬಳಿಕ ಇದೀಗ ನ್ಯೂಜಿಲೆಂಡ್ ವಿರುದ್ಧವೂ ಟೀಂ ಇಂಡಿಯಾ ಹಿಡಿತ ಸಾಧಿಸಿದೆ.

ಇದನ್ನೂ ಓದಿ:  ಲಾರಾ ದಾಖಲೆ ಸರಿಗಟ್ಟಿದ ’ಶಿಖರ್ ಧವನ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ಗೆ ಆರಂಭದಲ್ಲಿ ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿದರೆ, ಬಳಿಕ ಕುಲ್ದೀಪ್ ಯಾದವ್ ಸ್ಪಿನ್ ಮೋಡಿ ಮಾಡಿದರು. ಹೀಗಾಗಿ ನ್ಯೂಜಿಲೆಂಡ್ 38 ಓವರ್‌ಗಳಲ್ಲಿ 157 ರನ್‌ಗೆ ಆಲೌಟ್ ಆಯಿತು. ನಾಯಕ ಕೇನ್ ವಿಲಿಯಮ್ಸನ್‌ 64 ರನ್ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್‌ಗಳು ಹೋರಾಟ ನೀಡಲಿಲ್ಲ. ಭಾರತದಪರ ಕುಲ್ದೀಪ್ ಯಾದವ್ 4, ಮೊಹಮ್ಮದ್ ಶಮಿ 3, ಯಜುವೇಂದ್ರ ಚೆಹಾಲ್ 2 ಹಾಗೂ ಕೇದಾರ್ 1 ವಿಕೆಟ್ ಕಬಳಿಸಿದರು.