ವೆಲ್ಲಿಂಗ್ಟನ್(ಫೆ.03): ನ್ಯೂಜಿಲೆಂಡ್ ವಿರುದ್ದದ ಅಂತಿಮ ಹಾಗೂ 5ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 35 ರನ್ ಗೆಲುವು ಸಾಧಿಸಿದೆ. ಅಂಬಾಟಿ ರಾಯುಡು, ಹಾರ್ದಿಕ್ ಪಾಂಡ್ಯ ಸೇರಿದಂತೆ ಭಾರತದ ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದಿಂದ ಗೆಲುವಿನ ನಗೆ ಬೀರಿದೆ.  ಈ ಮೂಲಕ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೇ, ಸರಣಿಯನ್ನ 4-1 ಅಂತರದಿಂದ ಗೆದ್ದುಕೊಂಡಿತು. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ಕಿವೀಸ್ ದಾಳಿಗೆ ತತ್ತರಿಸಿತು. ನಾಯಕ ರೋಹಿತ್ ಶರ್ಮಾ, ಶಿಖರ್ ಧವನ್, ಶುಭ್‌ಮಾನ್ ಗಿಲ್ ಹಾಗೂ ಎಂ.ಎಸ್.ಧೋನಿ ಬಂದ ಹಾಗೇ ಪೆವಿಲಿಯನ್‌ಗೆ ವಾಪಾಸ್ಸಾದರು. ಕೇವಲ 18 ರನ್‌ಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ: ಕಿವೀಸ್ ಎದುರು ಅಬ್ಬರಿಸಿದ ಪಾಂಡ್ಯ: ಜೈ ಹೋ ಎಂದ ಟ್ವಿಟರಿಗರು..!

ಅಂಬಾಟಿ ರಾಯುಡು ಹಾಗೂ ವಿಜಯ್ ಶಂಕರ್ ಹೋರಾಟದಿಂದ ಭಾರತ ಚೇತರಿಸಿಕೊಂಡಿತು. ಶಂಕರ್ 45 ರನ್ ಸಿಡಿಸಿ ರನೌಟ್‌ಗೆ ಬಲಿಯಾದರೆ, ಅಂಬಾಟಿ ರಾಯುಡು 90 ರನ್ ಸಿಡಿಸಿದರು. ಕೇದಾರ್ ಜಾಧವ್ 34 ರನ್ ಸಿಡಿಸಿದರೆ, ಅಬ್ಬರಿಸಿದ ಹಾರ್ಧಿಕ್ ಪಾಂಡ್ಯ 22 ಎಸೆತದಲ್ಲಿ 5 ಸಿಕ್ಸರ್ ನೆರವಿನಿದ 45 ರನ್ ಸಿಡಿಸಿದರು. ಭಾರತ 49.5 ಓವರ್‌ಗಳಲ್ಲಿ 252 ರನ್‌ಗೆ ಆಲೌಟ್ ಆಯಿತು.

253 ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ಹೆನ್ರಿ ನಿಕೋಲ್ಸ್ 8 ರನ್‌ಗೆ ನಿರ್ಗಮಿಸಿದರು. ಕಾಲಿನ್ ಮುನ್ರೋ 24 ರನ್ ಸಿಡಿಸಿ ಔಟಾದರೆ, ರಾಸ್ ಟೇಲರ್ ಅಂಪೈರ್ ತಪ್ಪಿನಿಂದ ಪೆವಿಲಿಯನ್ ಸೇರಿದರು. ಕೇನ್ ವಿಲಿಯಮ್ಸ್ 39 ಹಾಗೂ ಟಾಮ್ ಲಾಥಮ್ 37 ರನ್ ಕಾಣಿಕೆ ನೀಡಿದರು.

ಇದನ್ನೂ ಓದಿ: ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಮಾಜಿ ಯೋಧನಿಗೆ ನೆರವಾದ ಗಂಭೀರ್!

ಜೇಮ್ಸ್ ನೀಶನ್  ಹೋರಾಟ ಕಿವೀಸ್ ಪಾಳಯದಲ್ಲಿ ಗೆಲುವಿನ ಆಸೆ ಚಿರುಗುರಿಸಿತು. ಆದರೆ ನೀಶಮ್ 44 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ವೇಗಕ್ಕೆ ನ್ಯೂಜಿಲೆಂಡ್ ತತ್ತರಿಸಿದರೆ, ಯುಜವೇಂದ್ರ ಚಹಾಲ್ ಸ್ಪಿನ್ ಮೋಡಿ ಮಾಡಿದರು. ಹೀಗಾಗಿ ನ್ಯೂಜಿಲೆಂಡ್ 44.1  ಓವರ್‌ಗಳಲ್ಲಿ217 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತ 35 ರನ್ ಗೆಲುವು ಸಾಧಿಸಿತು.

ಇದನ್ನೂ ಓದಿ:ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಕಬಳಿಸಿದರೆ, ಯುಜುವೇಂದ್ರ ಚೆಹಾಲ್ 3 ವಿಕೆಟ್ ಉರುಳಿಸಿದ್ದಾರೆ. 5 ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 4-1 ಅಂತರದಲ್ಲಿ ಟ್ರೋಫಿ ಗೆದ್ದುಕೊಂಡಿತು.