ಎಡ್ಜ್‌ಬಾಸ್ಟನ್(ಆ.04): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ  31 ರನ್‌ಗಳ ವಿರೋಚಿತ ಸೋಲು ಅನುಭವಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 194 ರನ್ ಟಾರ್ಗೆಟ್ ಪಡೆದಿದ್ದ ಭಾರತ 162 ರನ್‌ಗೆ ಆಲೌಟ್ ಆಗೋ  ಮೂಲಕ ಸೋಲು ಅನುಭವಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭಿವಿಸಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ 287 ರನ್‌ಗೆ ಆಲೌಟ್ ಆಗಿತ್ತು. ನಾಯಕ ಜೋ ರೂಟ್ 80 ಹಾಗೂ ಕೆಟನ್ ಜೆನ್ನಿಂಗ್ಸ್ 42 ರನ್ ಕಾಣಿಕೆ ನೀಡಿದರು. ಆರ್ ಅಶ್ವಿನ್ 4 ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದ್ದರು.

ಇಂಗ್ಲೆಂಡ್ ಇನ್ನಿಂಗ್ಸ್‌ಗೆ ಉತ್ತರವಾಗಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಯನ್ನ ಹೊರತು ಪಡಿಸಿ ಇನ್ಯಾರು ಉತ್ತಮ ಹೋರಾಟ ನೀಡಲಿಲ್ಲ.  ಕೊಹ್ಲಿ 149 ರನ್ ಸಿಡಿಸೋ ಮೂಲಕ ತಂಡ 274 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 13 ರನ್ ಹಿನ್ನಡೆ ಅನುಭವಿಸಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 180 ರನ್‌ಗೆ ಆಲೌಟ್ ಆಯಿತು. ಇಶಾಂತ್ ಶರ್ಮಾ 5 ಹಾಗೂ ಆರ್ ಅಶ್ವಿನ್ 3 ವಿಕೆಟ್ ಕಬಳಿಸಿ ಮಿಂಚಿದರು. ಹೀಗಾಗಿ ಭಾರತ ಗೆಲುವಿಗೆ 194 ರನ್ ಟಾರ್ಗೆಟ್ ಪಡೆಯಿತು.

194 ರನ್ ಸುಲಭ ಗುರಿ ಬೆನ್ನಟ್ಟಿದ ಭಾರತಕ್ಕೆ ಮತ್ತೆ ನಾಯಕ ವಿರಾಟ್ ಕೊಹ್ಲಿಯೇ ಆಸರೆಯಾಗಬೇಕಾಯಿತು. ಶಿಖರ್ ಧವನ್, ಮರುಳಿ ವಿಜಯ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ ಸೇರಿದಂತೆ ಎಲ್ಲಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು.

ಏಕಾಂಗಿ ಹೋರಾಟ ನೀಡಿದ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರು. ಆದರೆ ಹಾಫ್ ಸೆಂಚುರಿ ಬೆನ್ನಲ್ಲೇ ಕೊಹ್ಲಿ ವಿಕೆಟ್ ಪತನಗೊಂಡಿತು. ಕೊಹ್ಲಿ 51 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ  ಮೊಹಮ್ಮದ್ ಶಮಿ ನಿರ್ಗಮಿಸಿದರು.

ಇಶಾಂತ್ ಶರ್ಮಾ 11 ರನ್ ಸಿಡಿಸಿ ಔಟಾದರು. ಆದರೆ ಕೊನೆಯವರೆಗೂ ಹೋರಾಟ ನೀಡಿದ ಹಾರ್ದಿಕ್ ಪಾಂಡ್ಯ 31 ರನ್  ಸಿಡಿಸಿ ಔಟಾದರು. ಇದರೊಂದಿಗೆ ಭಾರತ 162 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ 31 ರನ್‌ಗ ಗೆಲುವು ಸಾಧಿಸಿತು. 1000ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್ ಐತಿಹಾಸಿಕ ಸಾಧನೆ ಮಾಡಿತು.