ಲಂಡನ್(ಆ.28): ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಕಸರತ್ತು ನಡೆಸುತ್ತಿದೆ. ಮಹತ್ವದ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಇಂಗ್ಲೆಂಡ್ ತಂಡಕ್ಕೆ ಸಂಕಷ್ಟ ಶುರುವಾಗಿದೆ.

ಇಂಗ್ಲೆಂಡ್ ತಂಡದ ಆಲ್ರೌಂಡರ್ ಕ್ರಿಸ್ ವೋಕ್ಸ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಸದ್ಯ ಅಭ್ಯಾಸದಲ್ಲೂ ವೋಕ್ಸ್ ಪಾಲ್ಗೊಂಡಿಲ್ಲ. ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಇನ್ನೆರಡು ದಿನದಲ್ಲಿ ಚೇತರಿಸಿಕೊಳ್ಳೋ ಸಾಧ್ಯತೆ ಕುರಿತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಯಾವುದೇ ಸ್ಪಷ್ಟತೆ ನೀಡಿಲ್ಲ.

ಇಂಜುರಿಯಿಂದ ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ದದ ನಿಗಧಿತ ಓವರ್ ಸರಣಿಯಿಂದ ಹೊರಗುಳಿದಿದ್ದ ವೋಕ್ಸ್, ಭಾರತ ವಿರುದ್ದದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದ್ದರು. ವಾಪಾಸ್ಸಾದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 

ಮಹತ್ವದ ಪಂದ್ಯ ಆರಂಭಕ್ಕೂ ಮುನ್ನವೇ ಕ್ರಿಸ್ ವೋಕ್ಸ್ ಇಂಜುರಿ ಇಂಗ್ಲೆಂಡ್ ತಂಡದ ಆತಂಕ ಹೆಚ್ಚಿಸಿದೆ. ಈಗಾಗಲೇ 3ನೇ ಟೆಸ್ಟ್ ಪಂದ್ಯ ಸೋತಿರುವ ಇಂಗ್ಲೆಂಡ್ ಗೆಲುವಿನ ಹಳಿಗೆ ಮರಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ 4ನೇ ಟೆಸ್ಟ್ ಪಂದ್ಯದಲ್ಲಿ ವೋಕ್ಸ್ ಕಣಕ್ಕಿಳಿಯೋ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.