ಐಪಿಎಲ್ ಆರಂಭಕ್ಕೂ ಮುನ್ನವೇ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ಶ್ರೀಲಂಕಾದ ವೇಗಿ ಮತೀಶ ಪತಿರಾಣಗೆ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅನುಮತಿ ನಿರಾಕರಿಸಿದೆ. ಇದು ಕೆಕೆಆರ್ ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.

ಕೋಲ್ಕತಾ: ಐಪಿಎಲ್ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ, ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಶ್ರೀಲಂಕಾದ ವೇಗದ ಬೌಲರ್ ಮತೀಶ ಪತಿರಾಣಗೆ ಐಪಿಎಲ್‌ನಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅನುಮತಿ ನಿರಾಕರಿಸಿದೆ ಎಂದು ವರದಿಯಾಗಿದೆ. ಗಾಯದಿಂದ ಇನ್ನೂ ಪೂರ್ತಿಯಾಗಿ ಚೇತರಿಸಿಕೊಳ್ಳದ ಕಾರಣ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಈ ನಿರ್ಧಾರ ತೆಗೆದುಕೊಂಡಿದೆ.

ಪತಿರಾಣ ಐಪಿಎಲ್ ಆಡೋದೇ ಡೌಟ್

ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಪತಿರಾಣ ಅವರ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿತ್ತು. ನಾಲ್ಕು ಓವರ್ ಬೌಲಿಂಗ್ ಮಾಡಿದ ನಂತರ ಅವರು ಕುಂಟುತ್ತಲೇ ಮೈದಾನದಿಂದ ಹೊರನಡೆದಿದ್ದರು. ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದ ಪತಿರಾಣ, ಇನ್ನೂ ಸಂಪೂರ್ಣ ಫಿಟ್‌ನೆಸ್ ಕಂಡುಕೊಂಡಿಲ್ಲ.

18 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದ ಪತಿರಾಣ, ಸೀಸನ್‌ನ ಯಾವುದಾದರೂ ಹಂತದಲ್ಲಿ ತಂಡಕ್ಕೆ ವಾಪಸ್ ಆಗಬಹುದು ಎಂಬ ನಿರೀಕ್ಷೆಯಲ್ಲಿ KKR ಇತ್ತು. ಹೀಗಾಗಿ, ತಂಡವು ಇನ್ನೂ ಬದಲಿ ಆಟಗಾರನನ್ನು ಘೋಷಿಸಿಲ್ಲ. ವರದಿಗಳ ಪ್ರಕಾರ, KKR ಮ್ಯಾನೇಜ್ಮೆಂಟ್ ಪ್ರತಿದಿನ ಪತಿರಾಣಗಾಗಿ ಫ್ಲೈಟ್ ಟಿಕೆಟ್ ಬುಕ್ ಮಾಡಿ, ಅದನ್ನು ಕ್ಯಾನ್ಸಲ್ ಮಾಡುವ ಪರಿಸ್ಥಿತಿಯಲ್ಲಿದೆ. ಪತಿರಾಣ ಅನುಪಸ್ಥಿತಿ ಕೋಲ್ಕತಾಗೆ ದೊಡ್ಡ ತಲೆನೋವಾಗಿದೆ. ಯಾಕಂದ್ರೆ, ತಂಡದ ಮತ್ತೊಬ್ಬ ಪ್ರಮುಖ ಬೌಲರ್ ಹರ್ಷಿತ್ ರಾಣಾ ಕೂಡ ಗಾಯದ ಕಾರಣ ಈ ಇಡೀ ಸೀಸನ್‌ನಿಂದ ಹೊರಬಿದ್ದಿದ್ದಾರೆ.

ಕೆಕೆಆರ್ ತಂಡದ ಪಾಲಿಗೆ ಗಾಯದ ಮೇಲೆ ಬರೆ

ಹರಾಜಿನಲ್ಲಿ ತಂಡ ಸೇರಿದ್ದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಸಿಸಿಐ ನಿರ್ದೇಶನದ ಮೇರೆಗೆ ತಂಡದಿಂದ ಕೈಬಿಡಬೇಕಾಯಿತು. ಸದ್ಯಕ್ಕೆ, ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಮಾತ್ರ ತಂಡದಲ್ಲಿರುವ ಏಕೈಕ ವಿದೇಶಿ ವೇಗದ ಬೌಲರ್. ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿರುವ ಏಕೈಕ ಜಿಂಬಾಬ್ವೆ ಆಟಗಾರ ಕೂಡ ಇವರೇ. 22 ವರ್ಷದ ಪತಿರಾಣ, ಐಪಿಎಲ್‌ನಲ್ಲಿ ಇದುವರೆಗೆ 32 ಪಂದ್ಯಗಳಿಂದ 47 ವಿಕೆಟ್‌ಗಳನ್ನು ಪಡೆದಿದ್ದಾರೆ. 2023ರಲ್ಲಿ ಚೆನ್ನೈ ತಂಡದ ಪರ ಆಡಿ ಐಪಿಎಲ್ ಕಪ್ ಗೆದ್ದಿದ್ದ ಪತಿರಾಣ ಅನುಪಸ್ಥಿತಿ ಕೋಲ್ಕತ್ತಾಗೆ ದೊಡ್ಡ ಸವಾಲಾಗಲಿದೆ.

2024ರ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮತ್ತೊಮ್ಮೆ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಇನ್ನು ಅಭಿಷೇಕ್ ನಾಯರ್ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಜಂಟಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮಾರ್ಚ್ 29ರಂದು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.