ಎಡ್ಜ್‌ಬಾಸ್ಟನ್(ಆ.03): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ತಿರುವು ಪಡೆದುಕೊಳ್ಳುತ್ತಿದೆ.  13 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಆರ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿದೆ.

2ನೇ ದಿನ ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್, ಇಂದು 8 ರನ್  ಸಿಡಿಸಿದ ಕೆಟನ್ ಜೆನ್ನಿಂಗ್ಸ್ ವಿಕೆಟ್ ಕಬಳಿಸಿದರು. ನಾಯಕ ಜೋ ರೂಟ್ 14 ರನ್ ಸಿಡಿಸಿ ಔಟಾದರು. ಈ ಮೂಲಕ  ಅಶ್ವಿನ್ 3 ವಿಕೆಟ್ ಕಬಳಿಸಿದರು. 

ಅಶ್ವಿನ್ ಸ್ಪಿನ್ ಮೋಡಿ ಬಳಿಕ ವೇಗಿ ಇಶಾಂತ್ ಶರ್ಮಾ ದಾಳಿ ಆರಂಭಿಸಿದರು. ಡೇವಿಡ್ ಮಲಾನ್ 20 ರನ್ ಸಿಡಿಸಿ ಔಟಾದರು. ಇನ್ನು 28 ರನ್ ಸಿಡಿಸಿ ಅಪಾಯದ ಸೂಚನೆ ನೀಡಿದ ಜಾನಿ ಬೈರಿಸ್ಟೋ ಪೆವಿಲಿಯನ್ ಸೇರಿದರು. ಬೆನ್ ಸ್ಟೋಕ್ಸ್ 6 ರನ್ ಸಿಡಿಸಿ ಇಶಾಂತ್‌ಗೆ ವಿಕೆಟ್ ಒಪ್ಪಿಸಿದರು.   ಈ ಮೂಲಕ ಇಶಾಂತ್ ಪ್ರಮುಖ 3 ವಿಕೆಟ್ ಕಬಳಿಸಿದರು. ಇಂಗ್ಲೆಂಡ್ 86 ರನ್‌ಗೆ 6 ವಿಕೆಟ್ ಕಳೆದುಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 287 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 274 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 13 ರನ್ ಮುನ್ನಡೆ ಸಾಧಿಸಿತ್ತು.